ಅಪ್ಪನೆಂಬ ಆಲದ ಮರ : ಸುಜಾತ ಪ್ರಾಣೇಶ್ ಅವರ ಕವನ

suddionenews
1 Min Read

 

 

ಅಪ್ಪ ನೀನು ಆಲದ ಮರದಂತೆ
ನಿನ್ನ ಮನಸು ವಿಶಾಲವಾದ ಗಗನದಂತೆ
ತೋರುವೆ ಮಕ್ಕಳಲ್ಲಿ ನಿನ್ನ ಪ್ರೀತಿ ಮಮತೆ

ನಿನ್ನ ಸುಖವ ಮರೆಯುವೆ ಮಕ್ಕಳಿಗಾಗಿ
ನೀನಾಗಿಬಿಡುವೆ ನಿಜವಾದ ತ್ಯಾಗಿ
ದುಡಿದು ದಣಿಯುವೆ ಮನೆಗಾಗಿ

ಕೇಳಿದ್ದನ್ನು ಕೊಡಿಸುವ ಕಲ್ಪವೃಕ್ಷ ನೀನು
ತಿದ್ದಿ ಬುದ್ಧಿ ಹೇಳುವ ಗುರುವು ನೀನು
ವಾತ್ಸಲ್ಯ ಧಾರೆ ಹರಿಸಿಬಿಡುವೆ ನೀನು

ದಾರಿದೀಪವಾಗಿ ಮುನ್ನಡೆಸುವೆ ನೀನು
ಕಂದ ನೀನೆ ಕಣ್ಣಬೆಳಕು ಎನ್ನುವೆ ನೀನು
ಕೂಸುಮರಿ ಮಾಡುತ ಆಡಿಸುವೆ ನೀನು

ನನ್ನ ನೋಡಿ ಕಷ್ಟಗಳ ಮರೆಯುವೆ ನೀನು
ನಾನೆ ನಿನ್ನ ಜಗವೆಂದು ಹೇಳುವೆ ನೀನು
ನನಗೆ ನೋವಾದರೆ ಸಹಿಸಲಾರೆ ನೀನು

ಉತ್ತಮ ಸಂಸ್ಕಾರ ನೀಡಿ ಬೆಳೆಸುವೆ ನೀನು
ಸಮಾಜವ ಎದುರಿಸಲು ಧೈರ್ಯ ಕೊಡುವೆ ನೀನು
ನಿಸ್ವಾರ್ಥಿಯಾಗಿ ಬಾಳಲು ಕಲಿಸುವೆ ನೀನು

ನಿನ್ನ ಹೆಸರೇ ನನ್ನ ನಿಜವಾದ ಗುರುತು
ನನ್ನ ಜೀವನವೇ ಇದಕ್ಕೆ ಋಜುವಾತು
ನೀನೇ ನನ್ನ ಬಾಳಿನ ಜೀವತಂತು

ನನ್ನ ಯಶಸ್ಸು ನಿನಗೆ ಆನಂದ ನೀಡುವುದು
ಇಂದಿಗೆ ಬಾಳು ಸಾರ್ಥಕ ಎನಿಸುವುದು
ಧನ್ಯತೆಯ ಭಾವದಿಂದ ನಿನ್ನ ಮನ ತುಂಬುವುದು

ನಿನ್ನ ಜೀವನ ಸಂಧ್ಯೆಯಲಿ ಊರುಗೋಲಾಗುವೆ
ನನ್ನ ಮಗುವಿನಂತೆ ನಿನ್ನ ಜೋಪಾನ ಮಾಡುವೆ
ನಿನಗಾಗಿ ನನ್ನ ಜೀವನ ಮುಡಿಪಾಗಿಡುವೆ .

ಸುಜಾತ ಪ್ರಾಣೇಶ್
ಚಿತ್ರದುರ್ಗ, ಮೊ : 9986153163

Share This Article
Leave a Comment

Leave a Reply

Your email address will not be published. Required fields are marked *