ಅಪ್ಪ ಆಟೋ ಡ್ರೈವರ್.. ಮಗಳು ನ್ಯಾಯಾಧೀಶೆ : ಚಿತ್ರದುರ್ಗದ ಯುವತಿಯ ಯಶೋಗಾಥೆ…!

2 Min Read

ಸುದ್ದಿಒನ್, ಚಿತ್ರದುರ್ಗ: ಎಷ್ಟೋ ಪೋಷಕರು ಬಡತನದಲ್ಲಿಯೇ ಇದ್ದರು ತನ್ನ ಮಕ್ಕಳಿಗೆ ಆ ಬಡತನ ಕಿಂಚಿತ್ತು ನೋವು ಕಾಣಿಸಬಾರದು ಎಂದೇ ಬಯಸುತ್ತಾರೆ. ಎಷ್ಟೇ ಕಷ್ಟವಾದರೂ ಸುಖವಾಗಿಯೇ ಸಾಕುತ್ತಾರೆ. ತಮ್ಮಂತೆ ಮಕ್ಕಳು ಆಗುವುದು ಬೇಡ. ಬದಲಿಗೆ ಯಾವುದಾದರೊಂದು ದೊಡ್ಡ ಅಧಿಕಾರಕ್ಕೆ ಏರಲಿ ಎಂದೇ ಆಸೆಪಡುತ್ತಾರೆ. ಅಂತೆಯೇ ಚಿತ್ರದುರ್ಗದಲ್ಲೊಂದು ಈ ರೀತಿಯ ಸ್ಪೂರ್ತಿದಾಯಕ ಕಥೆಯೊಂದು ಕಣ್ಣಿಗೆ ಬಿದ್ದಿದೆ. ಸುಮಾ ಎಂಬುವವರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ.

ಟಿ ಸುಮಾ.. ಇವರು ಚಿತ್ರದುರ್ಗ ಜಿಲ್ಲೆಯ ಕೋಡೆನಹಟ್ಟಿಯವರು‌.  ತಿಪ್ಪೆಸ್ವಾಮಿ ಹಾಗೂ ಭಾಗ್ಯಮ್ಮ ದಂಪತಿಯ ಮಗಳು. ಸುಮಾ ಅವರ ತಂದೆ ಆಟೋ ಚಾಲಕರು, ತಾಯಿ ಗೃಹಿಣಿ, ಇವರಿಗೆ ಅಣ್ಣ, ಅಕ್ಕ ಹಾಗೂ ಓರ್ವ ತಮ್ಮ ಇದ್ದಾರೆ. ಎಲ್ಲರೂ ಎಸ್ಸೆಸ್ಸೆಲ್ಸಿ, ಐಟಿಐ ವರೆಗೆ ಓದಿ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಕುಟುಂಬದಲ್ಲಿ ಪದವಿ ಶಿಕ್ಷಣ ಪಡೆದಿರುವ ಏಕೈಕ ಯುವತಿ ಸುಮಾ. ಇದೀಗ ನ್ಯಾಯಾಧೀಶೆಯಾಗುವ ಮೂಲಕ ಚಿತ್ರದುರ್ಗ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಟಿ.ಸುಮಾ, ಮಠದ ಕುರುಬರಹಟ್ಟಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪೂರೈಸಿದ್ದಾರೆ. ಎಸ್‍ಜೆಎಂ ಮಹಿಳಾ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡಿದ್ದಾರೆ. ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ 2020-21ರಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ.

2021 ರಲ್ಲೇ ನ್ಯಾಯಾಧೀಶರ ಪರೀಕ್ಷೆ ಬರೆದಿದ್ದು, ಸಂದರ್ಶನದಲ್ಲಿ ಪ್ರಯತ್ನ ವಿಫಲವಾಗಿತ್ತು. 2022 ರಲ್ಲಿ ಮರಳಿ ಯತ್ನ ಮಾಡಲು ಪರೀಕ್ಷೆ ಕಟ್ಟಿದ ವೇಳೆಯೇ ಅನಾರೋಗ್ಯ ಬಾಧಿಸಿದ ಕಾರಣಕ್ಕೆ ಮೇನ್ಸ್ ಪರೀಕ್ಷೆಗೆ ಹಾಜರಾಗಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ 2023ರಲ್ಲಿ ಛಲ ಬಿಡದೇ ಮತ್ತೆ ಪರೀಕ್ಷೆ ಬರದಿದ್ದಾರೆ. ಮೂರನೇ ಪ್ರಯತ್ನದಲ್ಲಿ ನ್ಯಾಯಾಧೀಶರಾಗುವ ಮೂಲಕ ತಮ್ಮ ಗುರಿ ತಲುಪಿದ್ದಾರೆ.

ತುಂಬಾ ಶ್ರಮಪಟ್ಟು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಮುಗಿಸಿ, ಸರಸ್ವತಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆಯಲು ಸೇರಿದಾಗಲೇ ನಾನು ನ್ಯಾಯಾಧೀಶೆ ಆಗಬೇಕು ಎಂಬ ಗುರಿಯನ್ನು ಹೊಂದಿದ್ದೆ.
ನ್ಯಾಯಾವಾದಿಗಳಾದ ಎಂ.ಸಿ.ಪಾಪಣ್ಣ ಅವರ ಮಾರ್ಗದರ್ಶನದಲ್ಲಿ ಮುಂದುವರೆದು, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದ ಪರಿಣಾಮ ಅಂದು ನಾನು ಕಂಡಿದ್ದ ಕನಸು ಇಂದು ನನಸಾಗಿದೆ. ಯಾರು ಕಠಿಣ ಪರಿಶ್ರಮದಿಂದ ಸಾಧನೆ ಮಾಡುತ್ತಾರೋ ಅವರಿಗೆ ಪ್ರತಿಫಲ ಲಭಿಸುತ್ತದೆ. ಡಾಕ್ಟರ್ ಮಕ್ಕಳು ಡಾಕ್ಟರೇ ಆಗಬೇಕು, ಲಾಯರ್ ಮಕ್ಕಳು ಲಾಯರೇ ಆಗಬೇಕು ಎಂದೇನಿಲ್ಲ. ಶ್ರದ್ಧೆಯಿಂದ ಓದಿದರೆ ಯಾರು ಬೇಕಾದರೂ ಇಂತಹ ಸಾಧನೆ ಮಾಡಬಹುದು ಎಂದಿದ್ದಾರೆ ಟಿ‌. ಸುಮಾ ಅವರು.

Share This Article
Leave a Comment

Leave a Reply

Your email address will not be published. Required fields are marked *