ಫಸಲ್ ಬಿಮಾ ಯೋಜನೆ :  ಸಮಸ್ಯೆಗಳ ಕುರಿತು ವಿಧಾನಸಭಾ ಕಲಾಪದಲ್ಲಿ ಚರ್ಚಿಸುತ್ತೇನೆ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

2 Min Read

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜುಲೈ25) : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ-ಮುಂಗಾರು 2023ರ ಪ್ರಚಾರ ವಾಹನಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ ನೀಡಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಫಸಲ್ ವಿಮಾ ಯೋಜನೆ ಪ್ರಚಾರ ವಾಹನಕ್ಕೆ ಹಸಿರು ನಿಶಾನೆ ತೋರಿದ ಅವರು, ಮುಂಗಾರು ಹಂಗಾಮಿನ ಫಸಲ್ ವಿಮಾ ಯೋಜನೆಯಡಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದರು.

ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತು ರೈತ ಮುಖಂಡರು ಈ ಸಂದರ್ಭದಲ್ಲಿ ಶಾಸಕರ ಗಮನಕ್ಕೆ ತಂದರು. ಈ ಯೋಜನೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳು, ವಿಮಾ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ಕರೆದು, ಮಾಹಿತಿ ಪಡೆಯಲಾಗುವುದು. ನಂತರ ಫಸಲ್ ಬಿಮಾ ಯೋಜನೆಯ ಸಮಸ್ಯೆಗಳ ಕುರಿತು ವಿಧಾನಸಭಾ ಕಲಾಪದಲ್ಲಿ ಚರ್ಚಿಸುತ್ತೇನೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ರೈತ ಮುಖಂಡರಿಗೆ ಭರವಸೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಚಂದ್ರಕುಮಾರ್ ಮಾತನಾಡಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅಗ್ರಿಕಲ್ಚರಲ್ ಇನ್‍ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ವತಿಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಪ್ರತಿಯೊಬ್ಬರು ಬೆಳೆಗಳಿಗೆ ವಿಮೆ ಮಾಡಿಸಿದರೆ ಅತಿವೃಷ್ಠಿ, ಅನಾವೃಷ್ಠಿಯಿಂದ ಸಮಸ್ಯೆಯಾದರೆ ಪರಿಹಾರ ಪಡೆಯಬಹುದು. ಸ್ಥಳೀಯ ವಿಕೋಪಗಳನ್ನೂ ಆಧರಿಸಿ ರೈತರು ವಿಮಾ ಯೋಜನೆಯಡಿ ನಷ್ಟ ಪರಿಹಾರವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ವಿಕೋಪಕ್ಕೆ ತುತ್ತಾದ ಬೆಳೆಗಳ ಮಾಹಿತಿಯನ್ನು ವಿಮಾ ಕಂಪನಿ ಪ್ರತಿನಿಧಿಗೆ 72 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದರು.

ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ 5408 ರೈತರಿಗೆ ಒಟ್ಟು ರೂ.10.69 ಕೋಟಿ ಮತ್ತು ಹಿಂಗಾರು ಹಂಗಾಮಿನಲ್ಲಿ 1285 ರೈತರಿಗೆ ಒಟ್ಟು 1.50 ಕೋಟಿ ಬೆಳೆ ಪರಿಹಾರದ ಮೊತ್ತ ರೈತರ ಖಾತೆಗೆ ಜಮೆಯಾಗಿದೆ. ಫಸಲ್ ಬಿಮಾ ಯೋಜನೆ ನೋಂದಣಿಗೆ ಇದೇ ಜುಲೈ 31 ಕೊನೆಯ ದಿನವಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಆಯಾ ರೈತ ಸಂಪರ್ಕಗಳಲ್ಲಿ ರೈತರು ಪಡೆಯಬಹುದು ಎಂದರು.

ಈ ಸಂದರ್ಭದಲ್ಲಿ  ಉಪವಿಭಾಗಾಧಿಕಾರಿ ಕಾರ್ತೀಕ್, ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್ ಬಾಬು, ಧನಂಜಯ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹಮೂರ್ತಿ, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *