ಶಿವಮೊಗ್ಗ: ಇಂದಿನಿಂದ ಬೆಂಗಳೂರಿನಲ್ಲಿ ಹೂಡಿಕೆದಾರರ ದೊಡ್ಡ ಸಮಾವೇಶ ನಡೆಯುತ್ತಿದೆ. ಈ ಸಮಾವೇಶವನ್ನು ವಿರೋಧಿಸಿರುವ ರೈತ ಸಂಘಟನೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ. ಹೂಡಿಕೆದಾರರಿಗೆ ಉಚಿತ ಭುಮಿ, ವಿದ್ಯುತ್ ನೀಡುವ ಮೊದಲು ರೈತರ ಸಮಸ್ಯೆಯನ್ನು ಆಲಿಸಬೇಕಿದೆ ಎಂದು ಆಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜಪ್ಪ, ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ಆರಂಭವಾಗಿದೆ. ಜನರಿಗೆ ಉದ್ಯೋಗ ನೀಡುತ್ತೇವೆ ಎಂಬುದು ಅದರ ಉದ್ದೇಶವಾಗಿದೆ. ಈ ತನಕ ಯಾವೆಲ್ಲಾ ಹೂಡಿಕೆ ಸಮಾವೇಶಗಳಾಗಿವೆಯೋ ಅವುಗಳಿಂದ ಯಾವುದೇ ಉದ್ಯೋಗ ಭದ್ರತೆ ಸಿಕ್ಕಿಲ್ಲಇಂತಹ ಸಮಾವೇಶದಿಂದ ಬೆಂಗಳೂರು ಸುತ್ತಲ ಭೂಮಿಯನ್ನ ಅಗ್ಗದ ಬೆಲೆಗೆ ಮಾರಿದ್ದೇ ಈ ಸಮಾವೇಶಗಳಿಂದ ಸಿಕ್ಕ ಲಾಭ.
ರೈತರ ಭೂಮಿಯನ್ನ ಕಸಿದುಕೊಂಡು ಅವರನ್ನ ಭೂರಹಿತರನ್ನಾಗಿ ಮಾಡಿದ್ದಾರೆ. ರೈತರು ಇಂತಹ ಸಮಾವೇಶಗಳಿಂದ ಬೀದಿಗೆ ಬಂದಿದ್ದಾರೆ. ಕಾರ್ಮಿಕರ ಕಾನೂನುಗಳನ್ನ ಮೊಟಕುಗೊಳಿಸಿ ಹೂಡಿಕೆದಾರರಿಗೆ ಉಚಿತ ವಿದ್ಯುತ್, ಭೂಮಿ ನೀಡಲಾಗಿದೆ. ಅತೀ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ಗಳು ಸಾಲ ನೀಡುತ್ತವೆ. ಈ ಸವಲತ್ತುಗಳನ್ನ ನೀಡಿದ ಮೇಲೆ ಏನು ಲಾಭ..? ಬಂಡವಾಳದಾರರನ್ನ ಶ್ರೀಮಂತರನ್ನಾಗಿಸುವುದಷ್ಟೇ ಇದರ ಉದ್ದೇಶ. ಇದು ಜನರ ಒಳಿತಿಗಾಗಿ ನಡೆಯುತ್ತಿಲ್ಲ ಹಾಗಾಗಿ ಈ ಸಮಾವೇಶವನ್ನ ರದ್ದು ಮಾಡಬೇಕು ಎಂದಿದ್ದಾರೆ.