ವರದಿ ಮತ್ತು ಫೋಟೋ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಸಹಕಾರ ಸಂಘಗಳ ಮೂಲಕ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡು ರೈತರು ತಮ್ಮ ಬದುಕನ್ನು ಹಸನು ಮಾಡಿಕೊಳ್ಳಬೇಕೆಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮನವಿ ಮಾಡಿದರು.
ಭರಮಸಾಗರದಲ್ಲಿ 69 ನೇ ಅಖಿಲ ಭಾರತ ಸಹಕಾರ ಸಪ್ತಾಯ-2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ ರೈತರಿಗೆ ಬಡ್ಡಿರಹಿತ ಸಾಲವನ್ನು ಸಹಕಾರ ಸಂಘಗಳು ನೀಡುತ್ತಿವೆ. ರೈತರು ಬೆಳೆದ ಬೆಳೆಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ಸಂಘಗಳ ಮೂಲಕ ಅನೇಕ ರೀತಿಯ ನೆರವು ಒದಗಿಸುತ್ತಿದೆ.
ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ ಸಿಗುತ್ತಿದೆ. ಸಹಕಾರ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಆಡಳಿತ ಮಂಡಳಿಯವರು ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಲಪಡಿಸಬೇಕು. ಪೈಪ್, ಮೋಟಾರ್, ಸಿಮೆಂಟ್, ಕಬ್ಬಿಣವನ್ನು ಸಹಕಾರ ಸಂಘಗಳ ಮೂಲಕ ನೀಡುತ್ತಿರುವುದು ಅತ್ಯುತ್ತಮವಾದ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾರ್ಕೆಟ್ ದರಕ್ಕಿಂತ ಹತ್ತು ಹದಿನೈದು ಪರ್ಸೆಂಟ್ ಕಡಿಮೆ ದರದಲ್ಲಿ ರೈತರಿಗೆ ಕೃಷಿ ಉಪಕರಣಗಳನ್ನು ಸಹಕಾರ ಸಂಘಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತನಿಲ್ಲದಿದ್ದರೆ ಯಾರು ಬದುಕಲು ಸಾಧ್ಯವಿಲ್ಲ. ಕೊರೋನಾ ಸಂದರ್ಭದಲ್ಲಿ ಬಡವರು, ಕಾರ್ಮಿಕರು, ರೈತರು ಯಾರು ಹಸಿವಿನಿಂದ ಇರಬಾರದೆಂದು ನಮ್ಮ ದೇಶದ ಪ್ರಧಾನಿ ಮೋದಿ ಪ್ರತಿ ವ್ಯಕ್ತಿಗೆ ಐದು ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನೀಡಿದ್ಧಾರೆ.
ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಒಂದು ಕೆ.ಜಿ.ಅಕ್ಕಿಗೆ 480 ರೂ.ಗಳನ್ನು ನೀಡಬೇಕು. ನಮ್ಮ ದೇಶದಲ್ಲಿ ಅಂತಹ ಆತಂಕಕಾರಿ ಪರಿಸ್ಥಿತಿಯಿಲ್ಲ. ಉಚಿತವಾಗಿ ಎಲ್ಲರಿಗೂ ಲಸಿಕೆ ನೀಡಿದ್ದರಿಂದ ಕೋವಿಡ್‍ನಲ್ಲಿ ಸಾವು-ನೋವಿನ ಪ್ರಮಾಣ ಕಡಿಮೆಯಿದೆ. ಅದೇ ಶ್ರೀಮಂತ ದೇಶಗಳಲ್ಲಿ ಇನ್ನು ಕೊರೋನಾ ನಿಯಂತ್ರಣದಲ್ಲಿಲ್ಲ. ಮಾಸ್ಕ್, ಸ್ಯಾನಿಟೈಸರ್‍ಗಳು ಸುಲಭವಾಗಿ ಸಿಗುವಂತೆ ಮಾಡಿರುವ ಭಾರತದ ಪ್ರಧಾನಿಗೆ ದೇಶದ ಮೇಲಿರುವ ಕಾಳಜಿಯನ್ನು ಶ್ಲಾಘಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹೆಚ್.ಎನ್.ತಿಪ್ಪೇಸ್ವಾಮಿ, ಮಾತೃಶ್ರಿ ಎನ್.ಮಂಜುನಾಥ್, ಎಚ್.ಎಂ.ದ್ಯಾಮಣ್ಣ, ಶ್ರೀಮತಿ ರತ್ನಮ್ಮ, ಭರಮಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಇ.ಕೃಷ್ಣಪ್ಪ, ಉಪಾಧ್ಯಕ್ಷೆ ಶ್ರೀಮತಿ ರೇವಮ್ಮ, ಸೋಮಶೇಖರ್, ಚಂದ್ರಶೇಖರ್, ಸಿದ್ದಪ್ಪ, ಅಶ್ರಫ್‍ವುಲ್ಲಾ, ಶಿವಣ್ಣ, ವೆಂಕಟೇಶ, ಮಂಜುನಾಥ, ಶಶಿಧರ್, ಶ್ರೀಮತಿ ಸಿದ್ದಮ್ಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗ ಮತ್ತು ಭರಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.