ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 21 : ರಾಜಕಾರಣಿಗಳು, ಅಧಿಕಾರಿಗಳ ದರ್ಪ ಇಳಿಸಿ ರೈತರಿಗೆ ಶಕ್ತಿ ತುಂಬಿದ ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ತತ್ವ ಸಿದ್ದಾಂತಗಳನ್ನು ರೈತರು ಮೈಗೂಡಿಸಿಕೊಂಡು ಒಗ್ಗಟ್ಟಾಗಿದ್ದಾಗ ಮಾತ್ರ ಸರ್ಕಾರಗಳು ಹೋರಾಟ, ಚಳುವಳಿಗಳಿಗೆ ಮಣಿಯುತ್ತವೆಂದು ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.
ನರಗುಂದ-ನವಲಗುಂದ ರೈತ ಹೋರಾಟಗಾರರ ಹುತಾತ್ಮರ ದಿನ ಹಾಗೂ ದೇವನಹಳ್ಳಿ ರೈತರ ಹೋರಾಟಕ್ಕೆ ಸಿಕ್ಕ ಜಯಕ್ಕೆ ಸಂಯುಕ್ತ ಹೋರಾಟ ಕರ್ನಾಟಕದಿಂದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿಜಯೋತ್ಸವ ಮತ್ತು ಶ್ರದ್ದಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಲಪ್ರಭಾ ನದಿ ದಂಡೆಯ ಮೇಲೆ ನಾಲೆ ತೋಡಿ ನೀರು ಹರಿಸದೆ ಅಭಿವೃದ್ದಿ ಶುಲ್ಕವನ್ನು ವಿಧಿಸಿದ್ದನ್ನು ವಿರೋಧಿಸಿ ನರಗುಂದ-ನವಲಗುಂದದಲ್ಲಿ ರೈತರು ಹೋರಾಟ ಚಳುವಳಿ, ಅರೆಬೆತ್ತಲೆ ಮೆರವಣಿಗೆ, ಸತ್ಯಾಗ್ರಹದರೂ ಸರ್ಕಾರ ಮಣಿಯದಿದ್ದಾಗ ಅಂತಿಮವಾಗಿ ತಹಶೀಲ್ದಾರ್ರನ್ನು ಅಡ್ಡಗಟ್ಟಿದ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪೊಲೀಸರ ಗೋಲಿಬಾರ್ನಿಂದ 1980, ಜು.21 ರಂದು ಇಪ್ಪತ್ತು ರೈತರು ಬಲಿಯಾಗುತ್ತಾರೆ. ಅಂದು ರೈತ ಸಂಘ ಹುಟ್ಟಿಕೊಳ್ಳುತ್ತದೆ. ಪಂಜಾಬ್, ದೆಹಲಿ ಗಡಿಯಲ್ಲಿಯೂ ರೈತರು ನ್ಯಾಯುಯುತವಾದ ಬೇಡಿಕೆಗಳಿಗೆ ಚಳುವಳಿ ನಡೆಸಿ ಕೊನೆಗೆ ಯಶಸ್ಸು ಕಂಡರು. ಒಣ ಪ್ರತಿಷ್ಟೆ, ಒಳ ಜಗಳ, ಭಿನ್ನಾಭಿಪ್ರಾಯದಿಂದ ರೈತರು ಛಿದ್ರವಾಗುತ್ತಿದ್ದಾರೆ. ಸರ್ಕಾರಕ್ಕೆ ಸವಾಲು ಹಾಕುವಂತ ದೊಡ್ಡ ಶಕ್ತಿ ಪ್ರೊ.ನಂಜುಂಡಸ್ವಾಮಿಯವರಲ್ಲಿ ಮಾತ್ರ ಇತ್ತು. ಅಂತಹ ರೈತ ನಾಯಕನನ್ನು ಸ್ಮರಿಸಿಕೊಂಡೆ ರೈತರು ಹೋರಾಟಕ್ಕೆ ಇಳಿಯಬೇಕೆಂದು ಕರೆ ನೀಡಿದರು.
ರೈತ ಮುಖಂಡ ಆರ್.ಬಿ.ನಿಜಲಿಂಗಪ್ಪ ಮಾತನಾಡಿ ನರಗುಂದ-ನವಲಗುಂದ ರೈತರು ಹುತಾತ್ಮರಾದ ಮೇಲೆ ರೈತ ಕುಲಕ್ಕೆ ಶಕ್ತಿ ಬಂತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಭೂಮಿ ಮೇಲೆ ಕಣ್ಣು ಹಾಕಿವೆ. ಎಲ್ಲರೂ ಒಗ್ಗಟ್ಟಾಗಿ ಕೃಷಿ ಭೂಮಿಯನ್ನು ಉಳಿಸಿಕೊಳ್ಳೋಣ ಎಂದು ಹೇಳಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ ಮಾತನಾಡುತ್ತ ದೇವನಹಳ್ಳಿ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ರೈತರ ಹೋರಾಟಕ್ಕೆ ನರಗುಂದ-ನವಲಗುಂದ ಹುತಾತ್ಮ ರೈತರ ಕಿಚ್ಚಿದೆ. ಬಿಡಿ ಹೋರಾಟಕ್ಕೆ ಸರ್ಕಾರಗಳು ಮಣಿಯುವುದಿಲ್ಲ. ಕಾರ್ಪೊರೇಟ್, ಬಂಡವಾಳಶಾಹಿಗಳು ರೈತರ ಭೂಮಿ ಕಬಳಿಸಲು ಹೊಂಚು ಹಾಕಿದ್ದಾರೆ. ಇದರ ವಿರುದ್ದ ಮೊದಲು ರೈತರು ಒಂದಾಗಬೇಕೆಂದು ಮನವಿ ಮಾಡಿದರು.
ರೈತ ಮುಖಂಡರುಗಳಾದ ಕೆ.ಪಿ.ಭೂತಯ್ಯ, ಧನಂಜಯ ಹಂಪಯ್ಯನಮಾಳಿಗೆ, ಬಸ್ತಿಹಳ್ಳಿ ಜಿ.ಸುರೇಶ್ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಜನಶಕ್ತಿಯ ಟಿ.ಶಫಿವುಲ್ಲಾ ಸೇರಿದಂತೆ ಅನೇಕ ರೈತರು ಸಭೆಯಲ್ಲಿ ಹಾಜರಿದ್ದರು.


