ಹಿರಿಯೂರಿನಲ್ಲಿ ರೈತರ ಉರುಳು ಸೇವೆ ಪ್ರತಿಭಟನೆ | ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ : ಪಾಪಣ್ಣ ಆಕ್ರೋಶ

2 Min Read

ಸುದ್ದಿಒನ್, ಹಿರಿಯೂರು, ಜುಲೈ. 17  : ತಾಲೂಕಿನ ವಾಣಿವಿಲಾಸ ಜಲಾಶಯದಿಂದ ಜವಗೊಂಡನಹಳ್ಳಿ ಹೋಬಳಿಯ ಗಾಯತ್ರಿ ಜಲಾಶಯ ಸೇರಿದಂತೆ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಬುಧವಾರ 30 ದಿನಕ್ಕೆ  ಕಾಲಿಟ್ಟಿದೆ.

ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಒಂದು ತಿಂಗಳ ಪೂರೈಸಿದ ಹಿನ್ನೆಲೆಯಲ್ಲಿ ರೈತ ಮುಖಂಡರು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ಧರಣಿ ಸ್ಥಳದಿಂದ ಗ್ರಾಮ ಪಂಚಾಯಿತಿಯ ವರೆಗೆ ಉರುಳು ಸೇವೆ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿದರು.

ಬಳಿಕ ಮಾತನಾಡಿದ ಮಾಜಿ ಜಿಪಂ ಸದಸ್ಯ ಸಿಬಿ ಪಾಪಣ್ಣ ಅವರು ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸಂವಿಧಾನಾತ್ಮಕವಾಗಿ ಜವನಗೊಂಡನಹಳ್ಳಿ ಹೋಬಳಿಗೆ ಸಿಗಬೇಕಾದ ನ್ಯಾಯ ಸಮ್ಮತವಾದ ನೀರಿನ ಹಕ್ಕು ಸಿಕ್ಕಿಲ್ಲ. ಈ ಭಾಗದ ಎಲ್ಲಾ ಕೆರೆಗಳು ನೀರಿಲ್ಲದೆ ಸೊರಗಿ ಅಂತರ್ಜಲ ಸಂಪೂರ್ಣ ಕುಂಠಿತಗೊಂಡಿದೆ. ಕುಡಿಯುವ ನೀರಿಗೂ ಸಹ ಆಹಾಕಾರ ಉಂಟಾಗಿದೆ. ನಮ್ಮ ತಾಲೂಕಿನಲ್ಲಿರುವ ವಿವಿ ಸಾಗರ ಜಲಾಶಯ ನೀರು ಹರಿಸಿ ಎಂದು ಹೋಬಳಿಯ ರೈತರು ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಒಂದು ತಿಂಗಳು ಪೂರೈಸಿದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ ತೋರಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು, ಸೌಜನ್ಯಕಾದರೂ ಪ್ರತಿಭಟನೆ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಹಿರಿಯೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಜೆ ಹಳ್ಳಿ ಹೋಬಳಿಯಿಂದ ಅತಿ ಹೆಚ್ಚು ಹಿಂದುಳಿದ ಮತಗಳನ್ನು ಪಡೆದಿರುವ ಸಚಿವರು ನ್ಯಾಯ ಕೊಡಿಸದೇ ಹೋದಲ್ಲಿ ಈ ಭಾಗದ ಜನರಿಗೆ ಮೊಸ ಮಾಡಿದಂತಾಗುತ್ತದೆ ಎಂದರು.

ಚಳಿಗಾಲದ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಈ ಸದನದಲ್ಲಿ ಕ್ಷೇತ್ರದ ಸಚಿವರು ಜೆಜೆ ಹಳ್ಳಿ ಹೋಬಳಿಯ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಬಗ್ಗೆ ಧ್ವನಿ ಎತ್ತುವ ಮೂಲಕ ಸರ್ಕಾರದ ಗಮನವನ್ನು ಸೆಳೆದು ಹೋರಾಟಕ್ಕೆ ಅಂತ್ಯ ಕಾಣಲಿ ಎಂದು ಸಚಿವರನ್ನು ಸಿಬಿ. ಪಾಪಣ್ಣ ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ ಮಾತನಾಡಿ ರೈತರ ನೀರಿನ ಚಳುವಳಿ ಆರಂಭಗೊಂಡು ಒಂದು ತಿಂಗಳು ಕಳೆದರೂ ಜಿಲ್ಲಾಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ರೈತರ ಬೇಡಿಕೆ ಬಗ್ಗೆ ಗಮನ ಹರಿಸದೆ ಇರುವುದು ನಿಜಕ್ಕೂ ಖಂಡನೀಯ, ಇದರಿಂದ ರೈತರನ್ನ ಅವಮಾನಿಸಲಾಗಿದೆ ಎಂದರು.

ರೈತರು ಧರಣಿ ನಡೆಸುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರುವುದು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಕರ್ತವ್ಯ. ಆದರೆ ಹೋರಾಟಗಾರರನ್ನ ನಿರ್ಲಕ್ಷಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಪಡೆದುಕೊಳ್ಳಬೇಕು. ಇತ್ತ ಜಲಸಂಪನ್ಮೂಲ ಸಚಿವರು,  ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳನ್ನು ಧರಣಿ ಸ್ಥಳಕ್ಕೆ ಕಳುಹಿಸಿ ರೈತರಿಂದ ಮಾಹಿತಿ ಪಡೆದು ವಾಣಿವಿಲಾಸ ಜಲಾಶಯದಿಂದ ಡಿಪಿಆರ್ ರೆಡಿ ಮಾಡಿಸಿ ಈ ಭಾಗದ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಆಲೂರು ಸಿದ್ದರಾಮಣ್ಣ, ಎಂಆರ್. ಈರಣ್ಣ, ನಟರಾಜ್ ಹಾಗೂ ತಿಮ್ಮರಾಯಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಹೋಬಳಿಯ ಅಧ್ಯಕ್ಷ ಈರಣ್ಣ, ಚಂದ್ರಶೇಖರ್, ಮಂಜುನಾಥ್, ಬಾಲಕೃಷ್ಣ, ತಿಮ್ಮಾರೆಡ್ಡಿ, ರಂಗಸ್ವಾಮಿ, ಹುಸೇನ್, ಶಿವಣ್ಣ, ಬಸವರಾಜ್, ವಜೀರ್, ಕರಿಯಪ್ಪ, ಮಹಮದ್, ಸುರೇಶ್, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *