ವರದಿ ಮತ್ತು ಫೋಟೋ ಕೃಪೆ : ಶ್ರೀಧರ, ತುರುವನೂರು, ಮೊ : 78997 89545
ಸುದ್ದಿಒನ್, ಚಿತ್ರದುರ್ಗ, ನವೆಂಬರ್.24 : ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ, ಸರ್ಕಾರ ಬರಗಾಲವೆಂದು ಘೋಷಣೆ ಮಾಡಿದೆ. ಈ ಸಂಬಂಧ ಹೋಬಳಿ ರೈತರು ಸರ್ಕಾರದಿಂದ ನೀಡಲಾಗುವ ಬರ ಪರಿಹಾರ ಪಡೆಯಲು ಎಫ್ಐಡಿ(ರೈತ ನೋಂದಣಿ ಸಂಖ್ಯೆ) ಕಡ್ಡಾಯವಾಗಿ ಮಾಡಿಸಲು ತುರುವನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗರಾಜ್ ಅವರು ತಿಳಿಸಿದ್ದಾರೆ.
ತಾಲ್ಲೂಕಿನ ತುರುವನೂರು ಹೋಬಳಿಯಲ್ಲಿ ಒಟ್ಟು ಸುಮಾರು 20,262 ಸರ್ವೇ ನಂಬರುಗಳಿದ್ದು, ಇದರಲ್ಲಿ 14,795 ರೈತರು ಎಫ್ಐಡಿಯನ್ನು ದಾಖಲಿಸಿದ್ದಾರೆ.ಆದರೆ ಇನ್ನು 5,462 ರೈತರು ಈವರೆಗೂ ನೋಂದಣಿ ಮಾಡಿಸಿಕೊಂಡಿಲ್ಲ.ಈ ಪ್ರಕ್ರಿಯೆಯಲ್ಲಿ ಒಟ್ಟಾರೆ ಇದುವರೆಗೂ ಹೋಬಳಿಯಲ್ಲಿ ಶೇಕಡಾ 73% ಫಲಿತಾಂಶ ದಾಖಲಾಗಿದೆ.
ಹಾಗೆಯೇ, ಸಣ್ಣ ರೈತರಿಗೆ ವಾರ್ಷಿಕ ಮೂರು ಬಾರಿ ತಲಾ ಎರಡು ಸಾವಿರ ರೂಪಾಯಿ ಹಣ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಈವರೆಗೂ 9,825 ರೈತರು ಇದರ ಪ್ರಯೋಜನ ಪಡೆಯುತ್ತಿದ್ದು, ಆಧಾರ್, ಪಹಣಿ, ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡುವ ಇ-ಕೆವೈಸಿ ಮಾಡಿಸದೇ ಇರುವ ಕಾರಣ 1,006 ರೈತರು ಈ ಯೋಜನೆಯ ಲಾಭ ಪಡೆಯಲು ಆಗಿರುವುದಿಲ್ಲ ಎಂದು ಹೇಳಿದರು.
ಹೋಬಳಿಯ ರೈತರು ಸದ್ಯ ಹಿಂಗಾರು ಕೂಡ ಕೈಕೊಟ್ಟಿದ್ದು,ನೀರಿನ ಮೂಲ ಅಥವಾ ಲಭ್ಯತೆಯ ಇರುವವರು ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ,ಹವರೆ,ಕಡ್ಲೆ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದ ಅವರು ಈ ಸಂದರ್ಭದಲ್ಲಿ ಎಫ್ಐಡಿ, ಕಿಸಾನ್ ಸಮ್ಮಾನ್ ಹಾಗೂ ಇತರೇ ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ತಿಳಿಸಿದ್ದಾರೆ.