ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.30 : ಚಿತ್ರದುರ್ಗದ ಎ.ಪಿ.ಎಂ.ಸಿ. ಆವರಣದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ಸ್ಥಾಪನೆಯಾಗಲು ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ನಿವೃತ್ತ ವಿಸ್ತರಣಾ ನಿರ್ದೇಶಕ ಡಾ.ವಿ.ವೀರಭದ್ರಯ್ಯ ಹಾಗೂ ಕೆ.ಹೆಚ್.ಸೀತಾರಾಮರೆಡ್ಡಿ ಇವರುಗಳೆ ಕಾರಣ ಎಂದು ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ ಶ್ಲಾಘಿಸಿದರು.
ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರಜತ ವರ್ಷಾಚರಣೆ ಹಾಗೂ ವಿಶ್ವ ಆಹಾರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಚಿತ್ರದುರ್ಗದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ಸ್ಥಾಪನೆಯಾಗಲು ಅನೇಕರ ಪರಿಶ್ರಮವಿದೆ. ಅದು ಈಗಿನ ಸದಸ್ಯರುಗಳಿಗೆ ಗೊತ್ತಿಲ್ಲ. ಇಲ್ಲಿ ನಿರಂತರವಾಗಿ ಅನೇಕ ತರಬೇತಿ ವಿಚಾರ ಸಂಕಿರಣಗಳು ನಡೆಯುತ್ತಿರುತ್ತವೆ. ಹಾಗಾಗಿ ಕೃಷಿ ತಂತ್ರಜ್ಞರ ಸಂಸ್ಥೆಯಿಂದ ರೈತರಿಗೆ ಅನೇಕ ಉಪಯುಕ್ತ ಮಾಹಿತಿಗಳು ಸಿಗುತ್ತಿವೆ ಎಂದು ಹೇಳಿದರು.
ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷೆ ಹಾಗೂ ಕೃಷಿ ಇಲಾಖೆಯ ನಿವೃತ್ತ ನಿರ್ದೇಶಕಿ ಶ್ರೀಮತಿ ಸಿ.ಎನ್.ನಂದಿನಿಕುಮಾರಿ ಮಾತನಾಡಿ ಶುದ್ದ ನೀರು ಮತ್ತು ಪೌಷ್ಠಿಕಾಂಶವುಳ್ಳ ಆಹಾರ ಪ್ರತಿಯೊಬ್ಬರಿಗೂ ಸಿಗಬೇಕು. ಬೋರ್‍ವೆಲ್‍ಗಿಂತ ಮಳೆ ನೀರು ಶ್ರೇಷ್ಟವಾದುದು. ಆದ್ದರಿಂದ ಮಳೆ ನೀರನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಬಳಸುವ ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬೇಕಿದೆ ಎಂದು ನೀರಿನ ಮಹತ್ವ ತಿಳಿಸಿದರು.
ಆಹಾರಕ್ಕೆ ಕೊರತೆಯಾಗಲಾರದು. ಆದರೆ ಮುಂದೊಂದು ದಿನ ನೀರಿಗಾಗಿ ಯುದ್ದವಾದರೂ ಆಶ್ಚರ್ಯವಿಲ್ಲ. ಮಣ್ಣು ಮತ್ತು ನೀರಿನ ಸಂರಕ್ಷಣೆ ಮುಖ್ಯ. ಇಲ್ಲದಿದ್ದರೆ ಮುಂದಿನ ಪೀಳಿಗೆ ಶಪಿಸುವಂತಾಗುತ್ತದೆ. ನೈಸರ್ಗಿಕವಾಗಿ ದೊರೆಯುವ ಸಂಪತ್ತನ್ನು ಇತಿಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಉಳಿಸಬೇಕಿದೆ. ಚಿತ್ರದುರ್ಗದಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ಪ್ರಾದೇಶಿಕ ಘಟಕ ಅತ್ಯುತ್ತಮವಾದ ಕೆಲಸ ಮಾಡಿಕೊಂಡು ಬರುತ್ತಿದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಸಿಗಬೇಕು. ಆಗ ರೈತನ ಬೆವರಿಗೆ ತಕ್ಕ ಫಲ ಸಿಗುತ್ತದೆ. ಕಳಪೆ ಗುಣಮಟ್ಟದ ಬೀಜ, ರಸಗೊಬ್ಬರಗಳನ್ನು ಬಳಸಿದಾಗ ಕೈಗೆ ಬೆಳೆ ಬಾರದೆ ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಕೀಟನಾಶಕ, ಬಿತ್ತನೆ ಬೀಜ, ರಸಗೊಬ್ಬರ ಬಳಕೆ ಬಗ್ಗೆ ಲೈಸೆನ್ಸ್ ಪಡೆಯಲು ಇಂತಹ ತರಬೇತಿಗಳು ಸಹಕಾರಿಯಾಗಲಿವೆ ಎಂದರು.
ಅಂತರ್ಜಲ ಹಾಗೂ ಮಳೆನೀರು ಕೊಯ್ಲು ತಜ್ಞ ಎನ್.ಜೆ.ದೇವರಾಜರೆಡ್ಡಿ ಮಾತನಾಡುತ್ತ ಜಲವೇ ಜೀವ, ನೀರಿಲ್ಲದ ಜೀವನ, ನೀರಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಕಷ್ಟ. ಶೇ.97.5 ರಷ್ಟು ಉಪ್ಪು ನೀರು, ಶೇ.2.5 ರಷ್ಟು ಮಾತ್ರ ಸಿಹಿನೀರಿನ ಲಭ್ಯವಿದೆ. ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿರುವ ನೀರು ಇಂದಿನ ಮಾರುಕಟ್ಟೆಯಲ್ಲಿ ಮಾರಾಟದ ವಸ್ತುವಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ರೂಪಾಂತರಗೊಂಡಿರುವ ಬಾವಿ ನೀರು, ಕೆರೆ ನೀರು, ನದಿ ನೀರು ಈಗ ಬಾಟಲ್ ನೀರಿಗೆ ಬಂದು ನಿಂತಿದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ನೀರನ್ನು ಸುರಕ್ಷಿತವೆಂದು ಕರೆಯಲು ಹೇಗೆ ಸಾಧ್ಯ? ಮೆಗ್ನಿಷಿಯಂ, ಕ್ಯಾಲ್ಸಿಯಂ, ಐರನ್ ಬೋರ್ ನೀರಿನಲ್ಲಿ ಮಿತಿಮೀರಿದೆ. ಕಾರ್ಖಾನೆ, ಚರಂಡಿ ಪಕ್ಕದ ತ್ಯಾಜ್ಯ, ನದಿ ಪಕ್ಕದಲ್ಲಿನ ಇಂಡಸ್ಟ್ರಿಸ್‍ಗಳು ನೀರನ್ನು ಕಲುಷಿತಗೊಳಿಸುತ್ತಿವ. ಸೇವಿಸುವ ತರಕಾರಿ, ಹಾಲಿನಲ್ಲಿಯೂ ಅಧಿಕ ಮೆಟಲ್‍ಗಳು ತುಂಬಿಕೊಂಡಿವೆ. ಕಾವೇರಿ ನದಿಯೂ ಕಲುಷಿತಗೊಂಡಿದೆ. ಶುದ್ದ ನೀರನ್ನು ಕಾಪಾಡಿದರೆ ಇಡಿ ಮನುಕುಲವನ್ನೇ ಸಂರಕ್ಷಿಸುತ್ತದೆ. ನೀರಿನ ಬಾಟಲನ್ನು ನಿರಂತರವಾಗಿ ಬಳಸುವುದರಿಂದ ಕ್ಯಾನ್ಸ್‍ರ್‍ಗೆ ತುತ್ತಾಗುವ ಲಕ್ಷಣಗಳಿರುತ್ತವೆ. ಕಲುಷಿತ ನೀರು ಭವಿಷ್ಯಕ್ಕೆ ಮಾರಕ ಎನ್ನುವ ಜಾಗೃತಿ ಎಲ್ಲರಲ್ಲಿಯೂ ಮೂಡಬೇಕಿದೆ ಎಂದು ಹೇಳಿದರು.
ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಜಿ.ಸಿ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್, ಸಂಸ್ಥಾಪಕ ಸದಸ್ಯ ಕೆ.ಹೆಚ್.ಸೀತಾರಾಮರೆಡ್ಡಿ, ಡಾ.ವಿ.ವೀರಭದ್ರಯ್ಯ, ಎ.ಪಿ.ಎಂ.ಸಿ.ಕಾರ್ಯದರ್ಶಿ ಬಿ.ಎಲ್.ಕೃಷ್ಣಪ್ಪ ಎಂ.ಮಹಂತೇಶಪ್ಪ, ವೀರಣ್ಣ ಕೆ.ಕಮತರ, ಇ.ಜಯರಾಮರೆಡ್ಡಿ, ಚಿದಾನಂದಪ್ಪ, ವಿ.ಸದಾಶಿವ, ಎಸ್.ಹನುಮಂತರಾಯರೆಡ್ಡಿ, ಐ.ಎ.ಟಿ.ಸಂಸ್ಥೆ ಖಜಾಂಚಿ ಡಾ.ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.