ಚಿತ್ರದುರ್ಗ, (ಅ.26) : ಸಾರಿಗೆ ಸಚಿವ ಶ್ರೀರಾಮುಲು ಸುಳ್ಳು ಹೇಳುವುದರಲ್ಲಿ ನಂಬರ್ ಒನ್ ಎಂದು ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಆರೋಪಿಸಿದರು.
ಹಿರಿಯೂರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ ಸೌಲಭ್ಯ ಒದಗಿಸುವಂತೆ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದರು.
ಶ್ರೀ ರಾಮುಲು ಇಡೀ ರಾಜ್ಯದ ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದ್ದರು. ಆದರೆ ಅವರು ಪ್ರತಿನಿಧಿಸುವ ಮೊಳಕಾಲ್ಮೂರು ತಾಲೂಕಿಗೆ ಸಾರಿಗೆ ವ್ಯವಸ್ಥೆ ಸರಿಯಾಗಿ ಕಲ್ಪಿಸಿಲ್ಲ.ಇನ್ನೂ ಹಿರಿಯೂರು ತಾಲ್ಲೂಕಿಗೆ ಎಲ್ಲಿಂದ ಬಸ್ ಬಿಡ್ತಾರೆ ? ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ಎಲ್ಲಿಂದ ಬಸ್ ಬಿಡ್ತಾರೆ. ಅವರು ಸುಳ್ಳು ಹೇಳುವುದರಲ್ಲಿ ನಂಬರ್ ಒನ್, ಜಿಲ್ಲೆಗೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಹಾಗೂ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಶಾಸಕ ಎಂ. ಚಂದ್ರಪ್ಪ ವಿರುದ್ಧ ರೈತ ಮುಖಂಡರು ಘೋಷಣೆ ಕೂಗಿದರು.