2023ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಕೆಲ ತಿಂಗಳಿನಿಂದ ಚರ್ಚೆ ನಡೆಯುತ್ತಲೆ ಇದೆ. ಸಿದ್ದರಾಮಯ್ಯ ಕೂಡ ಇನ್ನು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಅವರ ಬೆಂಬಲಿಗರು, ಅಭಿಮಾನಿಗಳು ನಮ್ಮ ಕ್ಷೇತ್ರದಲ್ಲಿಯೇ ನಿಲ್ಲಿ ಅಂತ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಇದೀಗ ಬಾದಾಮಿ ಕ್ಷೇತ್ರದಲ್ಲಿಯೇ ಸ್ಪರ್ಧಿಸಲಿ ಅಂತ ಅವರ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.
ಖಾನಾಪುರದ ಎಸ್ಕೆ ಗ್ರಾಮದ ಶೇಖಪ್ಪ ಪವಾಡಿನಾಯ್ಕರ್, ಶ್ರೀಕಾಂತ ಪೂಜಾರಿ ಸೇರಿದಂತೆ ಹಲವು ಅಭಿಮಾನಿಗಳು ಸಿದ್ದರಾಮಯ್ಯ ಅವರು ಬಾದಾಮಿಯಿಂದಾನೇ ಸ್ಪರ್ಧಿಸಲಿ ಎಂದು ಅಯ್ಯಪ್ಪ ಮಾಲೆ ಧರಿಸಿ, ಹರಕೆ ಹೊತ್ತು ಕೊಂಡಿದ್ದಾರೆ. ಜನವರಿ 4 ರಂದು ಸಿದ್ದರಾಮಯ್ಯ ಹೆಸರಿನಲ್ಲಿ ನಾಲ್ವರು ಅಯ್ಯಪ್ಪ ಮಾಲಾಧಾರಿಗಳು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಕ್ಷೇತ್ರದ ವಿಚಾರಕ್ಕೆ ಬಂದಾಗ ಸ್ವತಃ ಸಿದ್ದರಾಮಯ್ಯ ಅವರು ಕೂಡ ಬಾದಾಮಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದರು. ಬಾದಾಮಿಗೆ ಓಡಾಡುವುದಕ್ಕೆ ದೂರವಾಗುತ್ತೆ, ಜನರ ಸಮಸ್ಯೆ ಕೇಳಲು ಹತ್ತಿರದಲ್ಲಿಯೇ ಇದ್ದರೆ ಚೆಂದ ಎಂದು ಹೇಳುವ ಮೂಲಕ ಈ ಬಾರಿ ಬಾದಾಮಿಯಿಂದ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಸಿದ್ದರಾಮಯ್ಯ ಅವರ ಮನವೊಲಿಸುವುದಕ್ಕೆ ಮಹಿಳೆಯರು ಕೂಡ ಮುಂದಿನ ವಾರ ಬೆಂಗಳೂರಿಗೆ ಬರುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾರಾ ನೋಡಬೇಕಿದೆ.