ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಎಲ್ಲರಿಗೂ ಗೊತ್ತು. ಈ ಮಂಡಿನೋವಿನ ಚಿಕಿತ್ಸೆಗೆ ಅಮೆರಿಕಾಗೆ ತೆರಳುತ್ತಾರೆ. ಹೀಗಾಗಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ ಅನ್ನೋ ಊಹಾಪೋಹಗಳು ಸಹ ಹರಿದಾಡೋದಕ್ಕೆ ಶುರು ಮಾಡಿದ್ದವು. ಆದ್ರೆ ಚಿಕಿತ್ಸೆಗೆಂದು ಅಮೆರಿಕಾಗೆ ಹೋಗುವ ಬದಲು ಸಿಎಂ ನಾಟಿ ವೈದ್ಯರ ಮೊರೆ ಹೋಗಿದ್ದಾರೆ.
ಆ ನಾಟಿ ವೈದ್ಯ ನಿಜವಾದ ವೈದ್ಯನಲ್ಲ ಎಂದೇ ಹೇಳಲಾಗುತ್ತಿದೆ. ಆತನ ಬಗ್ಗೆ 2019ರಲ್ಲೇ ಕೇಸ್ ಕೂಡ ದಾಖಲಾಗಿದೆ ಎನ್ನಲಾಗಿದೆ. ಸದ್ಯ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಚಿಕಿತ್ಸೆ ಪಡೆಯುತ್ತಿರುವ ವೈದ್ಯನ ಹೆಸರು ಲೋಕೇಶ್ ಟೇಕಲ್ ಎಂದು.
ಈ ಲೋಕೇಶ್ ಈ ಹಿಂದೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಆಸ್ಪತ್ರೆಯೊಂದನ್ನ ತೆರೆದಿದ್ದರು. ಇದು ಆಸ್ಪತ್ರೆ ಕಂ ಕ್ಲಿನಿಕ್ ಆಗಿತ್ತು. 2019ರಲ್ಲಿ ಈ ಕ್ಲಿನಿಕ್ ಮೇಲೆ ಅಂದಿನ ಆಯುಷ್ ಅಧಿಕಾರಿಯಾಗಿದ್ದ ಸುಜಾತ ಪಾಟೀಲ ದಾಳಿ ಮಾಡಿದ್ದರು. ಈ ವೇಳೆ ವೈದ್ಯರೆನಿಸಿಕೊಂಡಿದ್ದಂತ ಲೋಕೇಶ್ ಬಳಿ ತೋರಿಸಲು ದಾಖಲೆಗಳೆ ಇರಲಿಲ್ಲ.
ಆಯುಷ್ಯ ಮಂಡಳಿಯಲ್ಲಿ ಯಾವುದೇ ನೋಂದಣಿ ಮಾಡಿಸದೆಯೇ ವೃತ್ತಿ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಅಧಿಕಾರಿ ಸುಜಾತ ಅವರು ಮುಳುಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಲೋಕೇಶ್ ಟೇಕಲ್ ಮೇಲೆ ಎಫ್ಐಆರ್ ಕೂಡ ದಾಖಲಾಗಿತ್ತು. ಎಫ್ಐಆರ್ ರದ್ದು ಕೋರಿ ಲೋಕೇಶ್ ಕೋರ್ಟ್ ಮೊರೆ ಹೋಗಿದ್ದರು. ಇದೇ ವರ್ಷದ ನವೆಂಬರ್ ನಲ್ಲಿ ಎಫ್ಐಆರ್ ರದ್ದಾಗಿದೆ. ಇನ್ನು ಈ ಲೋಕೇಶ್ ಬಳಿ ಸಚಿವರು, ಶಾಸಕರು, ಮಠಾಧೀಶರು ಚಿಕಿತ್ಸೆಗೆಂದು ಹೋಗ್ತಾರೆ. ಇದೀಗ ಸಿಎಂ ಬೊಮ್ಮಾಯಿ ಕೂಡ ಇವರ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.