ದೇಶದ ಬೆಳವಣಿಗೆಯಲ್ಲಿ ಫ್ಯಾಬ್ರಿಕೇಷನ್ ಪಾತ್ರ ದೊಡ್ಡದು : ಎಂ.ಕೆ.ತಾಜ್‍ಪೀರ್

suddionenews
3 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 12 : ಅಧಿಕಾರ, ಕುರ್ಚಿಗಾಗಿ ಆಸೆ ಪಡುವ ಬದಲು ಸಂಘವನ್ನು ಬಲಿಷ್ಠವಾಗಿ ಬೆಳೆಸುವತ್ತ ಗಮನ ಕೊಡಿ ಎಂದು ಸಮಾಜ ಸೇವಕಿ ವೀಣ ಸ್ಟೀಲ್ ಫ್ಯಾಬ್ರಿಕೇಷನ್ ಇಂಡಸ್ಟ್ರಿಸ್ ಮಾಲೀಕರುಗಳಿಗೆ ತಿಳಿಸಿದರು.

ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ಸ್ಟೀಲ್ ಫ್ಯಾಬ್ರಿಕೇಷನ್ ಇಂಡಸ್ಟ್ರಿಸ್ ಮಾಲೀಕರ ಅಸೋಸಿಯೇಷನ್ ಉದ್ಘಾಟಿಸಿ ಮಾತನಾಡಿದರು.

ಒಗ್ಗಟ್ಟಿನಲ್ಲಿ ಬಲವಿದೆ. ನಿಮ್ಮ ಗುರಿ, ಧ್ಯೇಯೋದ್ದೇಶಗಳನ್ನು ಸರ್ಕಾರದ ಗಮನಕ್ಕೆ ತನ್ನಿ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಅಸೋಸಿಯೇಷನ್ ಬೆಳೆಯಬೇಕಾದರೆ ಕೌಶಲ್ಯ ತರಬೇತಿಗಳನ್ನು ನಡೆಸಿ ನಿಮ್ಮದೇ ಆದ ಬ್ಯಾಂಕ್ ಸ್ಥಾಪಿಸಿಕೊಂಡು ಆರ್ಥಿಕವಾಗಿ ಸಬಲರಾಗಿ. ಸರ್ಧಾತ್ಮಕ ಯುಗವಾಗಿರುವುದರಿಂದ ನಿಮ್ಮಗಳ ಸೇವೆ ಗುಣಮಟ್ಟ ಉತ್ತಮವಾಗಿರಬೇಕೆಂದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಮಧ್ಯ ಕರ್ನಾಟಕದ ಚಿತ್ರದುರ್ಗದಲ್ಲಿ ಕೈಗಾರಿಕೆಗೆ ಆದ್ಯತೆ ಕೊಡಬೇಕಿದೆ. ಗೊದ್ರೇಜ್ ಗಾಡ್ರೆಜ್‍ಗಳು ಏನಾದರೂ ಪ್ರಸಿದ್ದಿ ಪಡೆದಿಯೆಂದರೆ ಫ್ಯಾಬ್ರಿಕೇಷನ್‍ಗಳಿಂದ ಎನ್ನುವುದನ್ನು ಮರೆಯುವಂತಿಲ್ಲ. ದೇಶದ ಬೆಳವಣಿಗೆಯಲ್ಲಿ ಫ್ಯಾಬ್ರಿಕೇಷನ್‍ಗಳ ಪಾತ್ರ ದೊಡ್ಡದು. ಫ್ಯಾಬ್ರಿಕೇಷನ್ ಎಂದರೆ ವೆಲ್ಡಿಂಗ್ ಎಂದು ಕೀಳಾಗಿ ನೋಡಲಾಗುತ್ತಿತ್ತು. ಈಗ ಕಾಲ ಬದಲಾಗಿರುವುದರಿಂದ ಫ್ಯಾಬ್ರಿಕೇಷನ್‍ಗೆ ಬೇಡಿಕೆಯಿದೆ ಎಂದು ಹೇಳಿದರು.

ಗುಣಮಟ್ಟ ಮತ್ತು ಬ್ರಾಂಡ್‍ನ ಜೊತೆ ಕಾರ್ಮಿಕರ ಸುರಕ್ಷತೆ ಮುಖ್ಯ. ಪಿ.ಎಫ್, ಇ.ಎಸ್.ಐ. ಮಾಡಿಸುವುದರಿಂದ ಕಾರ್ಮಿಕರಿಗೆ ಸರ್ಕಾರದಿಂದ ರಕ್ಷಣೆ ಸಿಗುತ್ತದೆ. ಮೊದಲು ಲೈಸೆನ್ಸ್ ಪಡೆದುಕೊಳ್ಳಿ. ಬ್ಯಾಂಕ್‍ನಿಂದ ಸಾಲ ದೊರಕುತ್ತದೆ. ಎಲ್ಲವನ್ನು ಸದುಪಯೋಗಪಡಿಸಿಕೊಂಡು ಅಸೋಸಿಯೇಷನ್‍ನ್ನು ಗಟ್ಟಿಯಾಗಿ ಬೆಳೆಸಿ ಎಂದು ಹಾರೈಸಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ವಿದ್ಯಾವಂತ ನಿರುದ್ಯೋಗಿಗಳು ಸಾಕಷ್ಟಿದ್ದು, ಕೆಲಸ ಹುಡುಕಿಕೊಂಡು ಬೇರೆ ಊರುಗಳಿಗೆ ಹೋಗುತ್ತಿದ್ದಾರೆ. ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು ಇಲ್ಲಿಯೇ ಕೈಗಾರಿಕೆಯನ್ನು ಸ್ಥಾಪಿಸಿದರೆ ನೂರಾರು ನಿರುದ್ಯೋಗಿಗಳಿಗೆ ಕೆಲಸ ಕೊಡಬಹುದು. ಈ ನಿಟ್ಟಿನಲ್ಲಿ ಸ್ಟೀಲ್ ಫ್ಯಾಬ್ರಿಕೇಷನ್ ಇಂಡಸ್ಟ್ರೀಸ್ ಮಾಲೀಕರುಗಳು ಚಿಂತಿಸಬೇಕಿದೆ ಎಂದು ಸಲಹೆ ನೀಡಿದರು.

ನಮ್ಮಲ್ಲಿ ಸಿಗುವ ಉಕ್ಕನ್ನು ಹೊರಗಿನವರು ಪಡೆದುಕೊಂಡು ವಿವಿಧ ಬಗೆಯ ಸಾಮಾಗ್ರಿಗಳನ್ನು ತಯಾರಿಸಿ ಕೊನೆಗೆ ನಮ್ಮವರಿಗೆ ಮಾರಾಟ ಮಾಡುತ್ತಾರೆ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕೋಟಿಗಟ್ಟಲೆ ಹಣ ಕೊಳೆಯುತ್ತಿದೆ. ಕಾರ್ಮಿಕರಿಗೆ ಸವಲತ್ತು ಸಿಗುತ್ತಿಲ್ಲ. ಸಾಮಾಜಿಕ ನ್ಯಾಯ ಕೊಡುವತ್ತ ಕಾರ್ಮಿಕ ಸಚಿವರು ಗಮನ ಹರಿಸಬೇಕೆಂದು ಮನವಿ ಮಾಡಿದರು.

ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ಧನ ಸಹಾಯ ಕಡಿತಗೊಳಿಸಲಾಗಿದೆ. ಸರ್ಕಾರ ಜಾರಿಗೆ ತಂದಿರುವ ಕಾನೂನು ಸರಳೀಕರಣಗೊಳಿಸಿ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಿ ಕೈಗಾರಿಕಾ ಕಾರ್ಯಾಗಾರ ನಡೆಸಬೇಕೆಂದರು.

ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡುತ್ತ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹತ್ತು ಸಾವಿರ ಕೋಟಿ ರೂ.ಗಳಿದೆ. ಕಾರ್ಮಿಕ ಇಲಾಖೆಯಲ್ಲಿ ಮೊದಲು ಹೆಸರುಗಳನ್ನು ನೊಂದಾಯಿಸಿಕೊಂಡಾಗ ಮಾತ್ರ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. 36 ಬಗೆಯ ವಿವಿಧ ಕಾರ್ಮಿಕರುಗಳಿದ್ದಾರೆ. ಕೆಲಸದ ಸ್ಥಳದಲ್ಲಿ ಆಕಸ್ಮಿಕವಾಗಿ ಕಾರ್ಮಿಕ ಮೃತಪಟ್ಟರೆ ಐದು ಲಕ್ಷ ರೂ.ಗಳ ಪರಿಹಾರ ಸಿಗುತ್ತದೆ. ಕಾರ್ಮಿಕ ಮಕ್ಕಳ ವಿವಾಹ ಹಾಗೂ ಶಿಕ್ಷಣಕ್ಕೆ ಹಣಕಾಸಿನ ನೆರವಿದೆ. ಹೆರಿಗೆ ಭತ್ಯೆ, ಹೀಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಇಲಾಖೆಯಲ್ಲಿ ನೊಂದಣಿಯಾಗಿರಬೇಕೆಂದರು.

ಜಿಲ್ಲಾ ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ ಎಲ್ಲಾ ರಂಗದಲ್ಲಿಯೂ ಪೈಪೋಟಿಯಿರುವಂತೆ ಉದ್ಯಮ ವಲಯದಲ್ಲಿಯೂ ಸ್ಪರ್ಧೆಯಿರುವುದರಿಂದ ಗುಣಮಟ್ಟ ಕಾಪಾಡಿಕೊಂಡು ಉದ್ಯಮವನ್ನು ಲಾಭದತ್ತ ಕೊಂಡೊಯ್ಯುವಂತೆ ಸ್ಟೀಲ್ ಫ್ಯಾಬ್ರಿಕೇಷನ್ ಇಂಡಸ್ಟ್ರೀಸ್ ಮಾಲೀಕರುಗಳಿಗೆ ತಿಳಿಸಿದರು.

ಸ್ಟೀಲ್ ಫ್ಯಾಬ್ರಿಕೇಷನ್ ಅಸೋಸಿಯೇಷನ್ ಇಂಡಸ್ಟ್ರಿಸ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ನಾಜೀಮ್ ಪಾಷ ಅಧ್ಯಕ್ಷತೆ ವಹಿಸಿದ್ದರು.

ಗೌರವಾಧ್ಯಕ್ಷ ಟಿ.ನಾಗರಾಜ್, ಉಪಾಧ್ಯಕ್ಷರುಗಳಾದ ಪ್ರವೀಣ್ ವಿ. ಖಾದರ್‍ಬಾಷಾ, ಎಸ್.ಬಾಷಾಬೇಗ್, ಕಾರ್ಯದರ್ಶಿ ವೆಂಕಟೇಶ್ ಎಸ್.ಆರ್. ಸಹ ಕಾರ್ಯದರ್ಶಿಗಳಾದ ಖಾದರ್ ಮೊಹಿದ್ದಿನ್, ಮನ್ಸೂರ್ ಅಲಿ, ಸಂಘಟನಾ ಕಾರ್ಯದರ್ಶಿ ಮೊಹಮದ್ ತೋಫಿಕ್, ಖಜಾಂಚಿ ಮಹಮದ್ ಖಲೀಲುಲ್ಲಾ, ನಿರ್ದೇಶಕ ಜೆ.ಎಂ.ರಾಜು, ಸಂಚಾಲಕ ಸೈಯದ್ ಮುದಸೀರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿ.ಟಿ.ಕುಮಾರ್‍ಬಾಬು ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

 

ಫೋಟೋ ವಿವರಣೆ : ತ.ರಾ.ಸು.ರಂಗಮಂದಿರದಲ್ಲಿ ಸ್ಟೀಲ್ ಫ್ಯಾಬ್ರಿಕೇಷನ್ ಇಂಡಸ್ಟ್ರಿಸ್ ಮಾಲೀಕರ ಅಸೋಸಿಯೇಷನ್ ಉದ್ಗಾಟಿಸಿ ವೀಣ ಮಾತನಾಡಿದರು.

Share This Article
Leave a Comment

Leave a Reply

Your email address will not be published. Required fields are marked *