ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದಾಸನಿಗೆ ಅನಾರೋಗ್ಯ ಬಿಡದೆ ಕಾಡುತ್ತಿದೆ. ಅದರಲ್ಲೂ ಬಳ್ಳಾರಿ ಜೈಲಿಗೆ ಹೋದಾಗಿನಿಂದ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಂಡಿದೆ. ಬೆನ್ನು ನೋವು ಎಂದು ಹೇಳಿದಾಗಿನಿಂದ ಜೈಲು ಅಧಿಕಾರಿಗಳು ಸಾಕಷ್ಟು ಸಲ ಹೇಳಿದರು ದರ್ಶನ್ ಮಾತ್ರ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಮಾಡಿಸಲು ಒಪ್ಪಿಗೆ ನೀಡಿರಲಿಲ್ಲ. ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ದರ್ಶನ್ ಬೆಂಗಳೂರಿನಲ್ಲಿಯೇ ಮಾಡಿಸಿಕೊಳ್ತೇನೆ ಎಂದಿದ್ದರು. ಆದರೆ ಈಗ ನೋವು ತಡೆಯಲಾಗದೆ ಸ್ಕ್ಯಾನಿಂಗ್ ಗೆ ಒಳಗಾಗಿದ್ದಾರೆ.
ನಿನ್ನೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಬೆನ್ನು ನೋವಿಗೆ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ದರ್ಶನ್ ಗೆ ಲಂಬರ್ ಸ್ಪೈನ್ ಸಮಸ್ಯೆ ಇರೋದು ಸ್ಕ್ಯಾನಿಂಗ್ ನಿಂದ ತಿಳಿದು ಬಂದಿದೆ. L1 ಹಾಗೂ L5 ಭಾಗದಲ್ಲಿ ಸಮಸ್ಯೆ ಇರುವುದು ಕಂಡು ಬಂದಿದೆ. ಈ ಸಮಸ್ಯೆಗೆ ಸರ್ಜರಿ ಮಾಡಿಸಲೇಬೇಕೆಂದು ನ್ಯೂರೋ ಸರ್ಜನ್ ವಿಶ್ವನಾಥ್ ಹಾಗೂ ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಸದ್ಯ ಈ ವಿಚಾರವನ್ನು ಜೈಲು ಅಧಿಕಾರಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಬಳಿ ಚರ್ಚಿಸಿ, ಸರ್ಜರಿ ಬಗ್ಗೆ ಚರ್ಚೆ ಮಾಡಲಿದ್ದಾರೆ. ಇನ್ನು ದರ್ಶನ್ ಅವರ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಇದೇ ತಿಂಗಳ 28ಕ್ಕೆ ಅರ್ಜಿ ವಿಚಾರಣೆಯನ್ನು ಕರೆದಿದ್ದಾರೆ. ಅನಾರೋಗ್ಯದ ವಿಚಾರವನ್ನಿಟ್ಟುಕೊಂಡು ಕೋರ್ಟ್ ಮೂಲಕ ಅನುಮತಿ ಪಡೆದು ದರ್ಶನ್ ಅವರನ್ನು ಮತ್ತೆ ಬೆಂಗಳೂರಿಗೆ ಕರೆಸಿಕೊಳ್ಳುವ ಯೋಚನೆಯನ್ನು ಕುಟುಂಬಸ್ಥರು ಮಾಡುತ್ತಿದ್ದಾರೆ.
ದರ್ಶನ್ ಅವರಿಗೆ ಅನಾರೋಗ್ಯವಿರುವ ಕಾರಣ, ಬೆನ್ನು ನೋವಿನಿಂದ ಬಳುತ್ತಿರುವುದರಿಂದ ಮೆಡಿಕಲ್ ಬೆಡ್, ಚೇರ್ ಎಲ್ಲಾ ಅಗತ್ಯತೆಯನ್ನು ಬಳ್ಳಾರಿ ಜೈಲು ಅಧಿಕಾರಿಗಳು ಪೂರೈಸಿದ್ದಾರೆ.