ಬೆಂಗಳೂರು: ಇತ್ತಿಚೆಗಷ್ಟೇ ಜಾತಿಗಣತಿ ವರದಿ ಸಲ್ಲಿಕೆಯಾಗಿದೆ. ಈ ವರದಿಗೆ ಸಾಕಷ್ಟು ಸಮುದಾಯಗಳು ಈಗಲೂ ವಿರೋಧ ವ್ಯಕ್ತಪಡಿಸುತ್ತಿವೆ. ಅದರಲ್ಲೂ ಶಾಮನೂರು ಶಿವಶಂಕರಪ್ಪ ಅವರು ವರದಿ ಬಗ್ಗೆ ವ್ಯಂಗ್ಯವಾಡಿದ್ದರು. 10 ವರ್ಷದಿಂದ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ಜಾತಿಗಣತಿ ವರದಿಯನ್ನು ಈಗ ಸಲ್ಲಿಸಿದ್ದಾರೆ ಎಂದಿದ್ದಾರೆ. ಈ ಹೇಳಿಕೆಗೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಕ್ರೋಶಗೊಂಡಿದೆ.
ಇಂದು ಸುದ್ದಿಗೋಷ್ಟಿ ನಡೆಸಿ ಸವಾಲು ಹಾಕಿದೆ. ಅವನೊಬ್ಬ ಶಾಸಕ ಮಾತನಾಡಿದ್ದಾನೆ. ಅವನೊಬ್ಬ ವಿಧಾನಸಭೆಯಲ್ಲಿಯೇ ಹಿರಿಯ ಶಾಸಕ. ಅವನು ಮಾತನಾಡಿದ್ದನ್ನು ನೋಡಿದ್ದೀರಾ..? ಬನ್ನಿ ಬೀದಿಗಿಳಿದು ಹೋರಾಟ ಮಾಡೋಣಾ. ನಾವೂ ಸಂಘರ್ಷಕ್ಕೆ ರೆಡಿ ಇದ್ದೇವೆ. ನಾವಾ.. ನೀವಾ ಎಂಬುದನ್ನು ನೋಡಿಯೇ ಬಿಡೋಣಾ. ನಮಗೆ ಇಷ್ಟು ವರ್ಷ ಮೋಸ ಮಾಡಿಕೊಂಡು ಬಂದಿದ್ದೀರಿ. ಜಾತಿ ಜನಗಣತಿಗೆ ಯಾರು ವಿರೋಧ ಮಾಡುತ್ತಿದ್ದಾರೋ ಅವರು ಇದುವರೆಗೂ ಲೂಟಿ ಮಾಡಿಕೊಂಡೇ ಬಂದಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಅವರು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ನೇಮಕ ಆದ ಹಿಂದುಳಿದ ಜಾತಿಗಳ ಎಲ್ಲ ವರದಿಯನ್ನು ವಿರೋಧ ಮಾಡಿಕೊಂಡು ಬಂದ ಜನ ಇವರು. ಹಿಂದುಳಿದ ಜಾತಿಗಳಿಗೆ ರೂಪಿಸುವ ಕಾರ್ಯಕ್ರಮಕ್ಕೆ ದ್ರೋಹ ಮಾಡಿ ನಮ್ಮ ತಟ್ಟೆಯ ಅನ್ನ ಕಸಿದುಕೊಂಡು ತಿನ್ನುತ್ತಿದ್ದಾರೆ. ವರದಿಯನ್ನು ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಬಿಡಿ. ಒಂದು ವೇಳೆ ವರದಿ ಶಿಫಾರಸು ಅನುಷ್ಠಾನ ಆಗಿಲ್ಲ ಅಂದ್ರೆ ಬೀದಿ ಹೋರಾಟ ಮಾಡುತ್ತೇವೆ. ಮೂರು ಜಾತಿಗಳು ಒಟ್ಟಾಗಿ ಹೋರಾಟ ಮಾಡುತ್ತೇವೆ. ಆ ಮೂರು ಜಾತಿಗಳ ಜನ ಇರುವುದು ಕೇವಲ 25 ರಿಂದ 30 ಪರ್ಸೆಂಟ್. ನಾವು 70% ಜನರು ಇದ್ದೇವೆ. ನಾಲ್ಕರಿಂದ ಐದು ಕೋಟಿ ಜನ ನಾವಿದ್ದೇವೆ. ಸಿಎಂ ಯಾರೇ ಆಗಿರಲಿ ಸರ್ಕಾರದ ವಿರುದ್ದ ನಾವು ಹೋರಾಟಕ್ಕೆ ರೆಡಿ ಇದ್ದೇವೆ. ನಾವು ಸೌಮ್ಯವಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯದ ಅಧಿಕಾರ ಅನುಭವಿಸಿದ ವ್ಯಕ್ತಿ ಏನ್ ಹೇಳಿದಾನೆ ಎಂದು ವಾಗ್ದಾಳಿ ನಡೆಸಿದರು.