ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಡಿ.25): ಕನಿಷ್ಟ ವೇತನ, ಪಿಂಚಣಿ, ಇಡಿಗಂಟು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರಕ್ಕೆ ಯಾವ ಸಂದರ್ಭದಲ್ಲಿ ಕರೆ ಕೊಟ್ಟರು ಹೋರಾಟಕ್ಕೆ ಸಿದ್ದರಾಗಿರಬೇಕೆಂದು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರಣ್ಣ ಬಿಸಿಯೂಟ ತಯಾರಕರನ್ನು ಜಾಗೃತಿಗೊಳಿಸಿದರು.
ಎ.ಐ.ಟಿ.ಯು.ಸಿ.ವತಿಯಿಂದ ರೈತ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಚಿತ್ರದುರ್ಗ ತಾಲ್ಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ವೇತನ ಹೆಚ್ಚಳಕ್ಕಾಗಿ ಕಳೆದ ಹತ್ತೊಂಬತ್ತು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆಳುವ ಎಲ್ಲಾ ಸರ್ಕಾರಗಳು ನಿರ್ಲಕ್ಷಿಸುತ್ತಲೆ ಬರುತ್ತಿವೆ. ರಾಜ್ಯ ಮತ್ತು ಕೇಂದ್ರದ ಜಂಟಿ ಯೋಜನೆ ಇದಾಗಿರುವುದರಿಂದ ಸಂದರ್ಭಕ್ಕನುಗುಣವಾಗಿ ಹೋರಾಟ ನಡೆಸಿ ದೆಹಲಿ ಚಲೋ ಚಳುವಳಿ ಕೂಡ ಮಾಡಿದ್ದೇವೆ.
ರಾಜ್ಯ ಸರ್ಕಾರ ಹೆಚ್ಚಳ ಮಾಡಿದರೂ ಕೇಂದ್ರದಿಂದ ನಯಾ ಪೈಸೆಯೂ ಬಂದಿಲ್ಲ. ಬಿಸಿಯೂಟ ತಯಾರಕರಾದ ನೀವುಗಳು ಅರೆ ಸರ್ಕಾರಿ ನೌಕರರಾಗಿ ಕೆಲಸ ಮಾಡುತ್ತಿದ್ದೀರ. ಗೌರವ ಸಂಭಾವನೆ ಹೆಸರಿನಲ್ಲಿ ಮಹಿಳೆಯರನ್ನು ಶೋಷಣೆಗೆ ತಳ್ಳುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ದ ಎಚ್ಚರವಾಗಿರಬೇಕೆಂದು ಕರೆ ನೀಡಿದರು.
ದೇಶದಲ್ಲಿ 25 ಲಕ್ಷ ಬಿಸಿಯೂಟ ತಯಾರಕರಿದ್ದು, ರಾಜ್ಯದಲ್ಲಿ ಒಂದು ಲಕ್ಷ ಹತ್ತೊಂಬತ್ತು ಸಾವಿರ ಬಿಸಿಯೂಟ ತಯಾರಕರಿದ್ದಾರೆ. ಕನಿಷ್ಟ ಕೂಲಿ ಪ್ರಕಾರ ಕಾಲ ಕಾಲಕ್ಕೆ ವೇತನ ಪರಿಷ್ಕರಣೆಯಾಗಬೇಕು. ದಿನಕ್ಕೆ ಆರು ಗಂಟೆಗಳ ಕಾಲ ಕೆಲಸ ಮಾಡುವ ಬಿಸಿಯೂಟ ತಯಾರಕರಿಗೆ ಕನಿಷ್ಟ ಹದಿನಾಲ್ಕು ಸಾವಿರ ರೂ.ಗಳನ್ನು ನೀಡಬೇಕು ಎಂಬುದು ನಮ್ಮ ಬೇಡಿಕೆ. ಅದಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದೇವೆ. ಹಾಗಾಗಿ ಸದಾ ನೀವುಗಳು ಚಳುವಳಿಗೆ ತಯಾರಿರಬೇಕು ಎಂದು ತಿಳಿಸಿದರು.
ಮುಖ್ಯ ಅಡುಗೆಯವರಿಗೆ ಎರಡು ಸಾವಿರದ ಏಳುನೂರು ರೂ, ಸಹಾಯಕಿಯರಿಗೆ 2600 ರೂ.ಗಳನ್ನು ನೀಡಲಾಗುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ವೇತನ ಹೆಚ್ಚಿಸುವುದಾಗಿ ನಂಬಿಸಿ ಕೈಕೊಟ್ಟರು. ಕೇಂದ್ರ ಸರ್ಕಾರ ಫೆ.1 ರಂದು ಮಂಡಿಸಲಿರುವ ಬಜೆಟ್ನಲ್ಲಿ ಬಿಸಿಯೂಟ ತಯಾರಕರ ವೇತನ ಹೆಚ್ಚಳ ಮಾಡದಿದ್ದರೆ ಫೆ.2 ಅಥವಾ 3 ರಂದು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಹೋರಾಟ ತೀವ್ರಗೊಳಿಸಬೇಕಾಗಿರುವುದರಿಂದ ಎಲ್ಲಿಯೂ ಉತ್ಸಾಹ ಕಳೆದುಕೊಳ್ಳಬೇಡಿ ಎಂದು ಬಿಸಿಯೂಟ ತಯಾರಕರಿಗೆ ಆವರಗೆರೆ ಚಂದ್ರಣ್ಣ ಹೇಳಿದರು.
ಎ.ಐ.ಟಿ.ಯು.ಸಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್ಬಾಬು, ಸಂಘಟನಾ ಕಾರ್ಯದರ್ಶಿ ಕಾಂ.ಸತ್ಯಕೀರ್ತಿ, ರಾಜ್ಯ ಮಂಡಳಿ ಸದಸ್ಯ ಟಿ.ಆರ್.ಉಮಾಪತಿ, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಸಂಚಾಲಕ ಕಾಂ.ಸಿ.ವೈ.ಶಿವರುದ್ರಪ್ಪ, ಪರ್ವಿನ್, ರಜಿಯ, ಶಾಂತಮ್ಮ ವೇದಿಕೆಯಲ್ಲಿದ್ದರು.