ಹಾಸನ: ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆನೆದಂತ ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲೂ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಸಂಸದೆ ಮೇನಕಾ ಗಾಂಧಿ. ಆನೆದಂತ ಕಳ್ಳತನ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಕೈವಾಡವಿದೆ ಎಂದು ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಆನೆದಂತ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಗಳು ಪ್ರಜ್ವಲ್ ರೇವಣ್ಣ ಅವರ ಬೆಂಬಲಿಗರಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಆರೋಪಕ್ಕೆ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದು, ಅವರಿಗೆ ತಿಳುವಳಿಕೆ ಹೇಳಲು ಸಿಎಂಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠ ನಡೆಸಿ, ಆನೆದಂತ ಕಳ್ಳತನಕ್ಕೆ ಸಹಾಯ ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ. ಮನೇಕಾ ಗಾಂಧಿ ಅವರು ಹಿರಿಯ ಸಂಸದರು, ಮಾಜಿ ಸಚಿವರು. ರಾಜ್ಯದಲ್ಲಿ ಅವರದ್ದೇ ಆದ ಸರ್ಕಾರ ಆಡಳಿತದಲ್ಲಿದೆ. ಪೂರ್ತಿ ಮಾಹಿತಿ ಪಡೆದು ಈ ಬಗ್ಗೆ ಮಾತನಾಡಬೇಕು. ಆನೆ ಸಾವನ್ನಪ್ಪಿರುವುದು ನನಗೆ ಗೊತ್ತಿಲ್ಲ. ನಾನು ಯಾವುದೇ ಅಧಿಕಾರಿಗೆ ಒತ್ತಡ ಹಾಕಿಲ್ಲ ಎಂದು ಹೇಳಿದ್ದಾರೆ.
ಆ ಆರೋಪಿಗಳಿಗೆ ನಾನೇ ಬೇಲ್ ಕೊಡಿಸಿದ್ದೇನೆ ಎಂದು ಆರೋಪಿಸಲಾಗಿದೆ. ಬೇಲ್ ಕೊಡಿಸಲು ಹೇಗೆ ಸಾಧ್ಯ ಬೇಲ್ ಕೋರ್ಟ್ ನೀಡುತ್ತೆ. ಅದರಲ್ಲಿ ನನ್ನ ಪಾತ್ರವೇನಿದೆ. ದುಡ್ಡಿಗಾಗಿ ಜೆಸಿಬಿ ಡ್ರೈವರ್ ಆನೆ ದೇಹವನ್ನು ಹೂತಿದ್ದಾನೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿ ಅಂತ ನಾನೇ ಹೇಳಿದ್ದೇನೆ. ನಾನೂ ಕೂಡ ಪ್ರಾಣಿ ಪ್ರಿಯ. ಇದರ ವಿರುದ್ಧವೇ ನಾನು ಇದ್ದೇನೆ. ನಾನು ಯಾವುದೇ ಅಧಿಕಾರಿಗೆ ಒತ್ತಡ ಹಾಕಿಲ್ಲ. ಸಾಕ್ಷಿ ಇದ್ದರೆ ಕೊಡಲಿ. ನಮ್ಮ ರಾಜ್ಯದ ಸಂಸದರ ಮೇಲೆ ಆರೋಪ ಮಾಡಿದ ಮೇಲೆ ಸಿಎಂ ಬೊಮ್ಮಾಯಿ ಅವರಿಗೆ ತಿಳುವಳಿಕೆ ಹೇಳಬೇಕಿತ್ತು. ಅವರಿಗೆ ಪತ್ರ ಬರೆಯಬೇಕು. ನಾನು ಬರೆಯುತ್ತೇನೆ ಎಂದಿದ್ದಾರೆ.