ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಪಕ್ಷಕ್ಕೆ ಹಾನಿಯುಂಟಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹಾಗೂ ಪುತ್ರ ಎಂ.ಸಿ.ರಘುಚಂದನ್ ಅವರನ್ನು ಉಚ್ಛಾಟನೆ ಮಾಡಬೇಕು ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ತಿಪ್ಪೇಸ್ವಾಮಿ ಛಲವಾದಿ ಒತ್ತಾಯಿಸಿದ್ದಾರೆ.
ಯಾವುದೇ ಅರ್ಹತೆ ಇಲ್ಲದಿದ್ದರೂ ಬಿ.ಎಸ್. ಯಡಿಯೂರಪ್ಪ ನಾಯಕತ್ವದಲ್ಲಿ ಗೆಲುವು ಸಾಧಿಸಿರುವುದನ್ನು ಮರೆತು ಪಕ್ಷದ ನಾಯಕರ ವಿರುದ್ಧವೇ ಮಾತನಾಡುತ್ತಿರುವುದು ಸರಿಯಲ್ಲ. ಭಾರತೀಯ ಜನತಾ ಪಕ್ಷ ನಿಷ್ಠೆ, ಪ್ರಾಮಾಣಿಕತೆಗೆ ಹೆಸರುವಾಗಿದೆ. ಆದರೆ ಪಕ್ಷಕ್ಕೆ ಹಾನಿಯುಂಟಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಖಂಡನೀಯ.
ಅವರ ದುರಾಹಂಕರಾದ ಮಾತುಗಳು ಕಾರ್ಯಕರ್ತರಿಗೆ ನೋವು ತರಿಸುತ್ತಿವೆ. ಕ್ಷೇತ್ರದಲ್ಲಿ ಕೆರೆ ಹೂಳೆತ್ತುವುದು, ರಸ್ತೆ ಅಭಿವೃದ್ಧಿ ಹೆಸರಲ್ಲಿ ಚಂದ್ರಪ್ಪ ನಡೆಸಿದ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಹಾಗೂ ಜನರೊಂದಿಗೆ ಅಸಭ್ಯ ವರ್ತನೆಗೆ ಕ್ಷೇತ್ರದ ಜನ ಬೇಸತ್ತಿದ್ದರು. ಪರಿಣಾಮ ಈ ಬಾರಿ ಸೋಲಿಸಲೇಬೇಕೆಂದು ಪಣ ತೊಟ್ಟಿದ್ದರು.
ಆದರೆ ಯಡಿಯೂರಪ್ಪ ಮುಖ ನೋಡಿ ಕೊನೇ ಗಳಿಗೆಯಲ್ಲಿ ಪಕ್ಷದ ಪರ ಮತ ಚಲಾಯಿಸಿ, ಚಂದ್ರಪ್ಪ ಗೆಲುವಿಗೆ ಕ್ಷೇತ್ರದ ಜನರು ಕಾರಣಕರ್ತರಾಗಿದ್ದಾರೆ. ಆದರೆ ನನ್ನ ಪುತ್ರನ ಸಂಘಟನೆ ಹಾಗೂ ಹಣದಿಂದಲೇ ಗೆಲುವು ಸಾಧಿಸಿದ್ದೇನೆ ಎಂಬ ಅಹಂಕಾರದ ಮಾತುಗಳು ಕಾರ್ಯಕರ್ತರಿಗೆ ಅವಮಾನ ಮಾಡುವಂತದ್ದಾಗಿದೆ ಎಂದು ಹೇಳಿದ್ದಾರೆ.
ಜೊತೆಗೆ ಕ್ಷೇತ್ರದಲ್ಲಿ ಹಿರಿಯ ರಾಜಕಾರಣಿ ಆಗಿರುವ ಜಿ.ಎಚ್.ತಿಪ್ಪಾರೆಡ್ಡಿ, ಪಕ್ಷ ಸಂಘಟನೆಗೆ ಅರ್ಪಿಸಿಕೊಂಡಿರುವ ಕೆ.ಎಸ್.ನವೀನ್ ವಿರುದ್ಧ ಟೀಕೆ ಮಾಡುತ್ತಿರುವ ಚಂದ್ರಪ್ಪ ಹಾಗೂ ಪುತ್ರ ರಘುಚಂದನ್‌ಗೆ ಪಕ್ಷ ಪಾಠ ಕಲಿಸಬೇಕಿದೆ. ಕೂಡಲೇ ಅವರಿಬ್ಬರನ್ನೂ ಉಚ್ಛಾಟಿಸಿ ಎಂದು ತಿಳಿಸಿದ್ದಾರೆ.
ಜೊತೆಗೆ ಅಹಂಕಾರದ ಮಾತುಗಳನ್ನಾಡುವುದರ ಜೊತೆಗೆ ಪಕ್ಷದ ಕಚೇರಿಗೆ ಕಲ್ಲು ಹೊಡೆಯಯುವುದು, ಹಾನಿ ಮಾಡುವುದು ಯಾವ ರೀತಿಯ ಸಂಸ್ಕೃತಿ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಕಾರಿಗೆ ಮುತ್ತಿಗೆ ಹಾಕಿಸಿ ದೌರ್ಜನ್ಯ ನಡೆಸಿರುವ ಚಂದ್ರಪ್ಪ ಅವರ ಜೊತೆ ಯಾವುದೇ ಸಂಧಾನ ನಡೆಸಬಾರದು. ಕೂಡಲೇ ಇವರಿಬ್ಬರ ವಿರುದ್ಧ ಪಕ್ಷದ ವರಿಷ್ಠರು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.