101 ದೇಗುಲ, 101 ಭಾವಿಗಳಿರುವ ಐತಿಹಾಸಿಕ ಸ್ಥಳ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಹಿನ್ನೆಲೆ ಇಂದಿನಿಂದ ರಾಜ್ಯ ಪುರಾತತ್ವ ಇಲಾಖೆ ಉತ್ಖನನ ಆರಂಭಿಸಿದೆ. ಲಕ್ಕುಂಡಿ ಗ್ರಾಮದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಜ.10ರಂದು ಮನೆ ನಿರ್ಮಾಣಕ್ಕೆ ಭುಮಿ ಅಗೆಯುವಾಗ ಚಿನ್ನಾಭರಣ ಸಿಕ್ಕಿದೆ. ಇದರ ಬೆನ್ನತ್ತಿದ ರಾಜ್ಯ ಸರ್ಕಾರ ಇದೀಗ ಮೂರು ತಿಂಗಳ ಕಾಲ ಉತ್ಖನನ ನಡೆಸಲು ಮುಂದಾಗಿದೆ. ಈ ಮೂಲಕ 20 ವರ್ಷಗಳ ಬಳಿಕ ಲಕ್ಕುಂಡಿಯಲ್ಲಿ ಮತ್ತೆ ಉತ್ಖನನ ಆರಂಭವಾಗಿದೆ. ಉತ್ಖನನ ನಡೆಸಲು ಕೆಲ ನಿಯಮಗಳನ್ನೂ ಪಾಲಿಸಬೇಕಿದೆ.
ಈಗ ರಾಜ್ಯ ಪುರಾತತ್ವ ಇಲಾಖೆ ಉತ್ಖನನ ನಡೆಸುವ ಕಾರ್ಯಕ್ಕೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಣ ಮಂಜೂರು ಮಾಡಿದೆ. 25 ಲಕ್ಷ ರೂ. ಮಂಜೂರು ಮಾಡಿದ್ದು, ಪ್ರವಾಸೋಧ್ಯಮ ಸಚಿವ ಎಚ್.ಕೆ.ಪಾಟೀಲ್ ಉತ್ಖನನ ನಡೆಯಲಿದೆ. ಜೊತೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಸಹಯೋಗದಲ್ಲಿ 3 ತಿಂಗಳು ಉತ್ಖನನ ಕಾರ್ಯ ನಡೆಯಲಿದೆ ಎಂದು ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಹೇಳಿದ್ದಾರೆ. ಇನ್ನು ಪುರಾತತ್ವ ಇಲಾಖೆಯ ಇತಿಹಾಸ ತಜ್ಞ ಆರ್.ತೇಜಶ್ವರ ನಿರ್ದೇಶನದಲ್ಲಿ ಉತ್ಖನನ ಕಾರ್ಯ ನಡೆಯಲಿದೆ.
ಇನ್ನು ಭದ್ರತೆಗಾಗಿ ಉತ್ಖನನ ನಡೆಯುವ ಸ್ಥಳದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾದೆ. ನಿತ್ಯ ಬೆಳಗ್ಗೆ 10:30ರಿಂದ ಸಂಜೆ 5 ಗಂಟೆಯವರೆಗೆ ಉತ್ಖನನ ನಡೆಯಲಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಸೇರಿ ಉತ್ಖನನ ನಡೆಸಲಿದ್ದಾರೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ. ಅಲ್ಲದೇ ಲಕ್ಕುಂಡಿಯಲ್ಲಿ ಈಗಾಗಲೇ ಹಲವರಿಗೆ ಮುತ್ತು, ರತ್ನ ಸೇರಿದಂತೆ ಚಿನ್ನಾಭರಣಗಳು ಸಿಕ್ಕಿದ್ದು, ಇನ್ನಷ್ಟು ನಿಧಿ, ಪುರಾತನ ಕಾಲದ ಕಾಸುಗಳು, ಶಾಸನಗಳು ಮತ್ತು ಕಲ್ಲು ಕೆತ್ತನೆಗಳು ಸಿಗುವ ನಿರೀಕ್ಷೆದ ಇದೆ.




