ಬೆಂಗಳೂರು: ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳನ್ನು ನಿಭಾಯಿಸುವುದೇ ದೊಡ್ಡ ತಲೆ ನೋವಾಗಿದೆ. ಲೆಕ್ಕಾಚಾರ ಮಾಡುವುದಕ್ಕೂ ಜನ ಸಮಯ ಕೊಡುತ್ತಿಲ್ಲ. ಮೊದಲು ಗ್ಯಾರಂಟಿಗಳನ್ನು ಜಾರಿಗೆ ತನ್ನಿ ಎಂದು ಒತ್ತಾಯ ಹಾಕುತ್ತಿದ್ದಾರೆ. ಜೂನ್ 1 ರಿಂದಾನೇ ಯೋಜನೆಗಳನ್ನು ಜಾರಿಗೆ ತರಬೇಕಿತ್ತು. ಆದ್ರೆ ಇಂದು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿ, ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದ್ದಾರೆ.

ಇಂದು ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆಯಾಗಲಿದೆ. ಬಳಿಕ ಯಾವೆಲ್ಲಾ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬ ನಿರ್ಧಾರವನ್ನು ತಿಳಿಸುತ್ತಾರೆ. ಸಿದ್ದರಾಮಯ್ಯ ಸಂಪುಟದಲ್ಲಿರುವ ಎಲ್ಲಾ ಸಚಿವರು ಹೇಳೋದು ಒಂದೇ. ಯಾವುದೇ ಕಾರಣಕ್ಕೂ ನಾವೂ ನೀಡಿದ ಭರವಸೆಗಳನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ ಅಂತ. ಹೀಗಾಗಿ ಎಲ್ಲರ ಚಿತ್ತ ಇಂದು ಸಂಪುಟ ಸಭೆಯತ್ತ ನೆಟ್ಟಿದೆ.

ಇನ್ನು ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಕ್ಕೆ ಕಡಿಮೆ ಮೊತ್ತದ ಹಣವೇನು ಖರ್ಚಾಗುವುದಿಲ್ಲ. ಬರೋಬ್ಬರಿ 1 ಲಕ್ಷ ಕೋಟಿ ಹಣ ವ್ಯಯಿಸಬೇಕಾಗುತ್ತದೆ. ಹಣಕಾಸು ಇಲಾಖೆ ಕೂಡ ತಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆ, ಸೌಲಭ್ಯದ ಬಗ್ಗೆ ತಿಳಿಸಿದ್ದಾರೆ. ಸದ್ಯಕ್ಕೆ ಮೂರು ಯೋಜನೆಗಳನ್ನು ಪೂರೈಸಲು ಹಣವಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದಿನ ಸಭೆಯಲ್ಲಿ ಯಾವ ಗ್ಯಾರಂಟಿಗಳಿಗೆ ಅಧಿಕೃತ ಆದೇಶ ಸಿಗುತ್ತೆ ಎಂಬುದನ್ನು ನೋಡಬೇಕಿದೆ.

