ಅಲೆಮಾರಿ ಸಮುದಾಯಗಳಿಗೆ ನ್ಯಾಯ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯ : ಅಹಿಂಸಾ ಚೇತನ್

3 Min Read

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ: ಶೋಷಿತ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಬೇಕಿದೆ ಎಂದು ಚಿತ್ರನಟ ಹಾಗೂ ಹೋರಾಟಗಾರ ಅಹಿಂಸಾ ಚೇತನ್ ಹೇಳಿದರು.

ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘ ಚಿತ್ರದುರ್ಗ ತಾಲ್ಲೂಕು ಸಮಿತಿಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಗೆ ನ್ಯಾಯ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯ. ಹಿಂದುತ್ವ, ಬ್ರಾಹ್ಮಣಶಾಹಿ, ಬಂಡವಾಳ ಶಾಹಿ, ಪುರುಷ ಪ್ರಧಾನ ವ್ಯವಸ್ಥೆಯಿಂದ ಶೋಷಿತ ಸಮುದಾಯಗಳು ಇನ್ನು ತೊಂದರೆ ಅನುಭವಿಸುತ್ತಿವೆ. ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್ ಇವರುಗಳ ತತ್ವ ಸಿದ್ದಾಂತಗಳ ಪ್ರಕಾರ ನಡೆದರೆ ಶೋಷಣೆಯಿಂದ ಹೊರಬರಲು ಸಾಧ್ಯ. ಪಿಂಜಾರ ಸಮುದಾಯದಲ್ಲಿ ಬಡತನವಿದೆ. ಹಾಗಾಗಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಇತಿಹಾಸವನ್ನು ತಿರುಚಲಾಗುತ್ತಿದೆ. ದಲಿತರು, ಆದಿವಾಸಿಗಳು, ಅಲೆಮಾರಿ, ಅರೆಅಲೆಮಾರಿ, ಅಲ್ಪಸಂಖ್ಯಾತರು, ಕಾರ್ಮಿಕರು, ಬಡವರು, ರೈತರು, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ. ಶಿಕ್ಷಣ ಎಲ್ಲರಿಗೂ ಸಿಗಬೇಕು. ಶಿಕ್ಷಣ ಎಂದರೆ ಕೇವಲ ಪದವಿ ಹಣಗಳಿಸುವುದಲ್ಲ. ಉತ್ತಮ ನಾಗರೀಕನಾಗಿ ಬಾಳುವುದು ಶಿಕ್ಷಣ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಜಲೀಲ್‍ಸಾಬ್ ಮಾತನಾಡಿ ಹಾಸಿಗೆ ಹೊಲಿಯುವ ಮೂಲಕ ಕುಲಕಸುಬು ಮಾಡುತ್ತಿರುವ ಪಿಂಜಾರ ಜನಾಂಗವನ್ನು ಯಾರು ಗುರುತಿಸುತ್ತಿಲ್ಲ. ಅದಕ್ಕಾಗಿ ನಮ್ಮ ಜನಾಂಗದ ಮಕ್ಕಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಇನ್ನು ಮುಂದೆ ಪ್ರತಿ ವರ್ಷವೂ ಪ್ರತಿಭಾ ಪುರಸ್ಕಾರ ನಡೆಯಬೇಕು. ಸಮಾಜದಲ್ಲಿನ ಕಟ್ಟಕಡೆಯ ಕಷ್ಟದಲ್ಲಿರುವವರಿಗೆ ನೆರವು ನೀಡುವುದು ನಮ್ಮ ಉದ್ದೇಶ. ಪಿಂಜಾರ ಜನಾಂಗದ ಮಕ್ಕಳು ಶಿಕ್ಷಣವಂತರಾಗಬೇಕು.

ಮಾನವೀಯ ಮೌಲ್ಯ ನಶಿಸಿ ಹೋಗುತ್ತಿದೆ. ಪಿಂಜಾರ ಜನಾಂಗದ ಮಕ್ಕಳಿಗೆ ಪ್ರೋತ್ಸಾಹವಿಲ್ಲದಂತಾಗಿದೆ ಎನ್ನುವ ನೋವು ಮನದಲ್ಲಿದೆ. ಅದಕ್ಕಾಗಿ ನನ್ನ ಕೈಲಾದಷ್ಟು ನೆರವು ನೀಡುತ್ತಿದ್ದೇನೆ. ಹಾಗಾಗಿ ಪಿಂಜಾರ ಜನಾಂಗ ಸಂಘದೊಂದಿಗೆ ಕೈಜೋಡಿಸಿದಾಗ ಮಾತ್ರ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು.

ಪಿಂಜಾರ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ದಿ ನಿಗಮಕ್ಕಾಗಿ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಸರ್ಕಾರಕ್ಕೆ ಸಾಕಷ್ಟು ಮನವಿಗಳನ್ನು ಸಲ್ಲಿಸಲಾಗಿದೆ. ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿರುವುದನ್ನು ಸರಿಪಡಿಸಿಕೊಳ್ಳಬೇಕು. ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡಬೇಕಿದೆ. ಡಿಸೆಂಬರ್ ಒಳಗೆ ಪ್ರತ್ಯೇಕ ಅಭಿವೃದ್ದಿ ನಿಗಮ ರಚನೆಯಾಗುವ ಸಾಧ್ಯತೆಗಳಿವೆ. ನಮ್ಮ ಜನಾಂಗದ ಮಕ್ಕಳನ್ನು ಪ್ರತಿಭಾ ಪುರಸ್ಕರಿಸುತ್ತಿರುವುದು ಪ್ರತಿ ಹಳ್ಳಿ ಹಾಗೂ ಮನೆ ಮನೆಗಳಿಗೆ ಮುಟ್ಟಬೇಕು. ಪಿಂಜಾರ ಎಂದು ಹೇಳಿಕೊಳ್ಳಲು ಯಾರು ಅಂಜಬೇಕಿಲ್ಲ. ದ್ವಂದ್ವ ನೀತಿ ಬಿಡಿ. ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಮಕ್ಕಳಿಗೆ ತಿಳಿಸಿದರು.

ಹಾಜಿ ಆರ್.ದಾದಾಪೀರ್ ಮಾತನಾಡಿ ಮಾನವೀಯತೆ, ನಾಗರೀಕತೆ, ಪರೋಪಕಾರದ ಗುಣ ಬೆಳೆಯಬೇಕಾದರೆ ಶಿಕ್ಷಣ ಮತ್ತು ಧಾರ್ಮಿಕ ಶಿಕ್ಷಣದಿಂದ ಮಾತ್ರ ಸಾಧ್ಯ. ನಮ್ಮ ಜನಾಂಗದಲ್ಲಿನ ಉಳ್ಳವರು ಬಡವರಿಗೆ ನೆರವು ನೀಡಿ ಮಕ್ಕಳ ಶಿಕ್ಷಣಕ್ಕೆ ಉತ್ತೇಜಿಸುವ ಕೆಲಸವಾಗಬೇಕು. ಕಸುಬಿನ ಆಧಾರದ ಮೇಲೆ ಪಿಂಜಾರರು ಗುರುತಿಸಿಕೊಂಡಿದ್ದಾರೆ. ಅಂಬೇಡ್ಕರ್ ಸಂವಿಧಾನದಲ್ಲಿ ಎಲ್ಲಾ ಜಾತಿಯವರಿಗೂ ಸಮಾನತೆಯನ್ನು ನೀಡಿದ್ದಾರೆ. ಸಂವಿಧಾನದಡಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಮುಂದೆ ಬರುವಂತೆ ಪಿಂಜಾರ ಜನಾಂಗಕ್ಕೆ ಕರೆ ನೀಡಿದರು.

ನದಾಫ್ ಪಿಂಜಾರ ಜನಾಂಗದ ಸಂಚಾಲಕ ಟಿ.ಶಫಿವುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತದಲ್ಲಿ ಮುಸಲ್ಮಾನರ ಸ್ಥಿತಿ ಚಿಂತಾಜನಕವಾಗಿದೆ ಎನ್ನುವುದನ್ನು ಸಾಚಾರ್ ಕಮಿಟಿ ತನ್ನ ವರದಿಯಲ್ಲಿ ತಿಳಿಸಿದೆ. ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ಪಿಂಜಾರ ಜನಾಂಗವನ್ನು ನಿರ್ಲಕ್ಷಿಸುತ್ತಲೆ ಬರುತ್ತಿರುವುದು ನೋವಿನ ಸಂಗತಿ. ಪ್ರತ್ಯೇಕ ಅಭಿವೃದ್ದಿ ನಿಗಮಕ್ಕಾಗಿ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಯಾವ ಪ್ರಯೋಜನವಾಗಿಲ್ಲ. ಅದಕ್ಕಾಗಿ ಪಿಂಜಾರ ಜನಾಂಗ ತಮ್ಮ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ತಾಲ್ಲೂಕು ಅಧ್ಯಕ್ಷ ಇಮಾಮ್‍ಸಾಬ್ ಅಧ್ಯಕ್ಷತೆ ವಹಿಸಿದ್ದರು.
ಹಸನ್‍ಪೀರ್, ಅಲ್ಲಿಪೀರ್, ಹುಸೇನ್‍ಪೀರ್ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *