ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಜನಸಾಮಾನ್ಯರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಆ.15 ರಿಂದ ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ಕೋಮುವಾದಿ ಬಿಜೆಪಿಯ ದುರಾಡಳಿತವನ್ನು ತಿಳಿಸಿ ಪಕ್ಷವನ್ನು ಸದೃಢಗೊಳಿಸೋಣ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಉಸ್ತುವಾರಿ ಮುರಳಿಧರ ಹಾಲಪ್ಪ ಸೂಚಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಸ್ವಾತಂತ್ರ್ಯ ಸಂಭ್ರಮ, 75 ಕಿ.ಮೀ.ಪಾದಯಾತ್ರೆ ಹಾಗೂ ಹಿಂದುಳಿದ ವರ್ಗಗಳ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲಾ ಘಟಕ, ಬ್ಲಾಕ್ ಸಮಿತಿ, ಪಂಚಾಯಿತಿ, ಬೂತ್‍ಮಟ್ಟದ ಸಭೆಗಳು ಆಗಬೇಕು. ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರವನ್ನು ಗೆಲ್ಲಸಿಕೊಂಡು ಬರುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ. ನಾನು ಶಾಲು, ಹಾರ, ಜೈಕಾರ ಹಾಕಿಸಿಕೊಂಡು ಹೋಗಲು ಬಂದಿಲ್ಲ. ತಳಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸ ಆಗಬೇಕು. ನಗರದ 35 ವಾರ್ಡ್ ಹಾಗೂ 23 ಪಂಚಾಯಿತಿಯನ್ನು ಜೊತೆಯಲ್ಲಿಟ್ಟುಕೊಂಡು ಸಾಗಬೇಕಿದೆ. ಕೈತಪ್ಪಿ ಹೋಗಿರುವ ಅಧಿಕಾರವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ರಾಷ್ಟ್ರಧ್ವಜ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಹಿಂದೆ ಬ್ರಿಟೀಷರಿಗೆ ಕಪ್ಪ ಕೊಡಬೇಕಾಗಿತ್ತು. ಈಗ ಬಿಜೆಪಿಯವರು ಟ್ಯಾಕ್ಸ್, ಜಿ.ಎಸ್.ಟಿ.ಯನ್ನು ಜನತೆಯ ಮೇಲೆ ಹೇರಿ ಕಪ್ಪ ವಸೂಲು ಮಾಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ಇನ್ನು ಶೂ, ಸಾಕ್ಸ್ ನೀಡಿಲ್ಲ. ಪಠ್ಯ ಪುಸ್ತಕಗಳು ಪೂರೈಕೆಯಾಗಲು ಇನ್ನು ನಾಲ್ಕು ತಿಂಗಳುಗಳು ಬೇಕು. ಬೈಸಿಕಲ್ ನಿಂತಿದೆ. ಬಸ್‍ಪಾಸ್ ವಿದ್ಯಾರ್ಥಿನಿ ವೇತನ ಸಿಗುತ್ತಿಲ್ಲ. ಹೊಸ ಮಕ್ಕಳಿಗೆ ಹಾಸ್ಟೆಲ್‍ಗಳಲ್ಲಿ ಪ್ರವೇಶ ಕಷ್ಟವಾಗಿದೆ.
ಅದಕ್ಕಾಗಿ ಯುದ್ದೋಪಾದಿಯಲ್ಲಿ ಸನ್ನದ್ದರಾಬೇಕು. ನಗರ ಮತ್ತು ಗ್ರಾಮಾಂತರ ಬ್ಲಾಕ್ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳಿಗೆ ದೊಡ್ಡ ಜವಾಬ್ದಾರಿಯಿದೆ. ಅಮೃತ ಮಹೋತ್ಸವ 75 ಪಾದಯಾತ್ರೆ, ಆ.3 ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯನವರ ಜನ್ಮದಿನಾಚರಣೆ, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆ.15 ರಂದು ನಡೆಯುವ ಸ್ವಾತಂತ್ರ್ಯೋತ್ಸವ ಪಾದಯಾತ್ರೆಗೆ ಜಿಲ್ಲೆಯಿಂದ ಹೆಚ್ಚು ಕಾರ್ಯಕರ್ತರು ಮುಖಂಡರುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು. ಎನ್.ಎಸ್.ಯು.ಐ. ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಗಟ್ಟಿಯಾಗಬೇಕು. ಮೂರು ತಿಂಗಳಲ್ಲಿ ಪಕ್ಷ ನೀಡಿರುವ ಗುರಿ ತಲುಪಬೇಕು ಎಂದು ಹೇಳಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಹನುಮಲಿ ಷಣ್ಮುಖಪ್ಪ ಮಾತನಾಡಿ ಪೂರ್ವಭಾವಿ ಸಭೆಯಲ್ಲಿ ಎಲ್ಲರೂ ನೀಡಿರುವ ಸಲಹೆಗಳಿಗೆ ನನ್ನ ಸಹಮತವಿದೆ. ಬೆಂಗಳೂರಿನಲ್ಲಿ ಆ.15 ರಂದು ನಡೆಯುವ ಪಾದಯಾತ್ರೆ ಹಾಗೂ ಆ.3 ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯನವರ ಹುಟ್ಟುಹಬ್ಬ ಹಾಗೂ ಜಿಲ್ಲೆಯಲ್ಲಿ 75 ಕಿ.ಮೀ.ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕಿದೆ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆಯಿದೆ. ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸೋಣ. ಅದಕ್ಕಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕುಮಾರ್ ಗೌಡ ಮಾತನಾಡುತ್ತ ದೇಶದ ಸ್ವಾತಂತ್ರಕ್ಕಾಗಿ ಕಾಂಗ್ರೆಸ್ ಪಕ್ಷ ಹೋರಾಡಿರುವುದರಿಂದ 75 ನೇ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು. 75 ತೆಂಗಿನ ಗಿಡ ಇಲ್ಲವೇ ಹಣ್ಣಿನ ಗಿಡಗಳನ್ನು ನೆಡುವುದು, 75 ಜನರನ್ನು ಹುಡುಕಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸುವುದು, 75 ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಕುಟುಂಬದವರನ್ನು ಗುರುತಿಸಿ ಸನ್ಮಾನಿಸುವುದು, ಆ.14 ರಂದು ಮಧ್ಯರಾತ್ರಿ ಗಾಂಧಿವೃತ್ತದಲ್ಲಿ ವಿಶೇಷ ಕಾರ್ಯಕ್ರಮ ಆಚರಿಸಿ ಕಾರ್ಯಕರ್ತರಲ್ಲಿ ಹುರುಪು ತುಂಬೋಣ ಎಂದು ಪೂರ್ವಭಾವಿ ಸಭಯಲ್ಲಿ ಸಲಹೆ ನೀಡಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡುತ್ತ ಜಿಲ್ಲೆಯಲ್ಲಿ ನಡೆಯುವ 75 ಕಿ.ಮೀ,ಪಾದಯಾತ್ರೆ, ಆ.3 ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯನವರ ಜನ್ಮದಿನ ಹಾಗೂ ಬೆಂಗಳೂರಿನಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿರೋಧಿಗಳಿಗೆ ಶಕ್ತಿ ಪ್ರದರ್ಶನ ಮಾಡಬೇಕಿದೆ. ಅದಕ್ಕಾಗಿ ಮುಖಂಡರು ವಹಿಸುವ ಜವಾಬ್ದಾರಿಯನ್ನು ಚಾಚೂ ತಪ್ಪದೆ ಪಾಲಿಸುತ್ತೇನೆಂದು ಭರವಸೆ ನೀಡಿದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡುತ್ತ ನಗರದ 35 ವಾರ್ಡ್‍ಗಳಲ್ಲಿ ಗೆದ್ದಿರುವ ಸೋತ ಅಭ್ಯರ್ಥಿಗಳನ್ನು ಬಳಸಿಕೊಂಡು ಆಯಾ ವಾರ್ಡ್‍ಗಳಲ್ಲಿಯೇ ಅಮೃತ ಮಹೋತ್ಸವ ಸಂಭ್ರಮಾಚರಣೆಯಾಗಬೇಕು. ಆ.3 ರಂದು ದಾವಣಗೆರೆಗೆ ರಾಹುಲ್‍ಗಾಂಧಿ ಆಗಮಿಸುತ್ತಿರುವುದರಿಂದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಂತದಿಂದಲೂ ಹೆಚ್ಚಿನ ಬಸ್‍ಗಳಲ್ಲಿ ಕಾರ್ಯಕರ್ತರನ್ನು ಕರೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಮಾತನಾಡಿ ಬೆಂಗಳೂರಿನಲ್ಲಿ ಪಾದಯಾತ್ರೆ, ಜಿಲ್ಲೆಯಲ್ಲಿ 75 ಕಿ.ಮೀ.ಪಾದಯಾತ್ರೆ ಹಾಗೂ ಸಿದ್ದರಾಮಯ್ಯನವರ ಜನ್ಮದಿನಾಚರಣೆ ಕುರಿತು ನಗರದ 35 ವಾರ್ಡ್‍ಗಳಲ್ಲಿ ವ್ಯಾಪಕ ಪ್ರಚಾರ ಮಾಡಿ ನಮ್ಮ ಪಕ್ಷದಿಂದ ಗೆದ್ದ ಹಾಗೂ ಸೋತವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜೊತೆಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 23 ಪಂಚಾಯಿತಿಗೂ ಪಾದಯಾತ್ರೆ ತಲುಪಬೇಕು.
ಗ್ರಾಮೀಣ ಭಾಗದಲ್ಲಿ ಅಲ್ಲಿನ ಮುಖಂಡರುಗಳನ್ನು ಪಾದಯಾತ್ರೆಯಲ್ಲಿ ತೊಡಗಿಸಿಕೊಳ್ಳಬೇಕು. ಸ್ಥಳೀಯ ಶಾಸಕರ ವರ್ತನೆಗೆ ಜನ ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರು ಹಾಗೂ ಮುಖಂಡರುಗಳಲ್ಲಿ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ನಾಗರಾಜ್ ಜಾನ್ಹವಿ, ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ಕೃಷ್ಣಪ್ಪ, ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ ವೇದಿಕೆಯಲ್ಲಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಮ್ಮ, ಮಾಜಿ ಸದಸ್ಯೆ ಆರತಿ ಮಹಡಿ ಶಿವಮೂರ್ತಿ, ನಗರಸಭೆ ಮಾಜಿ ಉಪಾಧ್ಯಕ್ಷೆ ರುದ್ರಾಣಿ ಗಂಗಾಧರ್, ಚಂದ್ರಕಲಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಮುದಸೀರ್ ನವಾಜ್ ಸೇರಿದಂತೆ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.