ಚಿತ್ರದುರ್ಗ, ನ.09: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿಲ್ಲಿ ಪ್ರತಿ ಮನೆಯಲ್ಲಿಯೂ, ಪ್ರತಿಯೊಬ್ಬರೂ ಅರೆಕಾಲಿಕ ಕಾನೂನು ಸ್ವಯಂ ಸೇವಕರಾಗಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್.ರೇಖಾ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರಸ್ವತಿ ಕಾನೂನು ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕಾನೂನು ಸೇವೆಗಳ ದಿನಾಚರಣೆ ಮತ್ತು ಅದರ ಅಂಗವಾಗಿ “ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ” ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅರೆಕಾಲಿಕ ಕಾನೂನು ಸ್ವಯಂ ಸೇವಕರು ಯಾವುದಾದರೂ ಸಮಸ್ಯೆ ಕಂಡು ಬಂದ ತಕ್ಷಣ ಸಂಬಂಧಪಟ್ಟ ಇಲಾಖೆಗೆ ವಿಷಯ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಅನ್ಯಾಯದ ವಿರುದ್ಧ ಧೈರ್ಯವಾಗಿ ಮಾತನಾಡಬೇಕು. ಧೈರ್ಯವಾಗಿ ಮಾತನಾಡಿದಾಗ ಮಾತ್ರ ನ್ಯಾಯ ಒದಗಿಸಲು ಸಾಧ್ಯವಿದೆ. ಅನ್ಯಾಯಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಎಲ್ಲಿಯಾದರೂ ಅನ್ಯಾಯ ಕಂಡಾಗ, ಮತ್ತೊಬ್ಬರಿಗೆ ನಮ್ಮ ಸಹಾಯ ಬೇಕಾದ ಸಂದರ್ಭದಲ್ಲಿ ನಾವುಗಳು ಸಹಾಯ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬಾಲ್ಯವಿವಾಹ ಪ್ರಕರಣ ಸೇರಿದಂತೆ ಇನ್ನಿತರೆ ಪ್ರಕರಣಗಳು ಕಂಡು ಬಂದಾಗ ಸಂಬಂಧಪಟ್ಟ ಸೂಕ್ತ ಸಂಸ್ಥೆಗೆ ವರದಿ ಮಾಡಬೇಕು. ಆದರೆ ಯಾರು ಸಹ ಇದನ್ನು ವರದಿ ಮಾಡುವುದಿಲ್ಲ. ಈ ಮನಸ್ಥಿತಿಯನ್ನು ಬಿಡಬೇಕು ಎಂದು ತಿಳಿಸಿದ ಅವರು, ಇದು ನಮ್ಮ ಕರ್ತವ್ಯ ಎಂದು ತಿಳಿದುಕೊಳ್ಳಬೇಕು ಎಂದರು.
ಕಾನೂನು ಅನುಷ್ಠಾನ ಮಾಡುವುದಕ್ಕೆ ಸಂಸ್ಥೆಗಳು ಇವೆ. ಸಾರ್ವಜನಿಕರಾಗಿ ನಾವುಗಳು ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಬೇಕಿದೆ. ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು ಎಂಬುದು ಕಾನೂನಿನ ಮೂಲ ಉದ್ದೇಶವಾಗಿದೆ. ನ್ಯಾಯ ಸಿಗುವುದಕ್ಕೆ ನಾವು ಸಹಕಾರಿಯಾಗಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರದ ಕಾಯ್ದೆ ಅನುಷ್ಟಾನ ಮಾಡಿದ ದಿನವನ್ನೇ ಕಾನೂನು ಸೇವೆಗಳ ದಿನ ಆಚರಣೆ ಮಾಡಲಾಗುತ್ತಿದೆ. ಜಿಲ್ಲಾಡಳಿತಕ್ಕಿಂತ ಮುಂಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಾರ್ವಜನಿಕರು ತಮ್ಮ ಕುಂದುಕೊರತೆಗಳಿಗೆ ಸಂಬಂಧಪಟ್ಟಂತೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಇದು ಸಂಸ್ಥೆಯ ಮಹತ್ವನ್ನು ತೋರಿಸುತ್ತಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಈ ವರ್ಷ ಬಹಳಷ್ಟು ಸೇವೆಗಳನ್ನು ಮಾಡಲಾಗಿದೆ. 127 ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಿದ್ದು, 28,118 ಜನರು ಫಲಾನುಭವಿಗಳಾಗಿದ್ದಾರೆ. 10 ಕಾರ್ಯಾಗಾರಗಳನ್ನು ಮಾಡಲಾಗಿದೆ. 03 ಬೃಹತ್ ಲೋಕ್ ಅದಾಲತ್ ಮಾಡಲಾಗಿದ್ದು, ಇದರಲ್ಲಿ 8,177 ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ರೂ.62.59 ಕೋಟಿ ಮೊತ್ತ ಸಂದಾಯವಾಗಿದೆ. ಜಿಲ್ಲೆಯಾದ್ಯಂತ 70 ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಕಾನೂನು ನೆರವು ನೀಡಲಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 51 ಜನರನ್ನು ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನಾಗಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಓರಿಯಂಟೇಶನ್ ಕೋರ್ಸ್ ಕುರಿತು ವಕೀಲರಾದ ಕೆ.ಎಸ್.ವಿಜಯ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಪ್ರೊ. ಎಂ.ಎಸ್.ಸುಧಾದೇವಿ, ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ. ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್. ಗಂಗಾಧರ್ ಸೇರಿದಂತೆ ವಕೀಲರು, ಅರೆಕಾಲಿಕ ಸ್ವಯಂ ಸೇವಕರು, ಸರಸ್ವತಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಇದ್ದರು.