ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.02 : ವಿಷಪೂರಿತ ಹಾಗೂ ಕಲಬೆರಕೆ ಆಹಾರ ಸೇವನೆಯಿಂದಾಗಿ ಚಿಕ್ಕವರಿಂದ ಹಿಡಿದು ದೊಡ್ಡವರತನಕ ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆಂದು ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ವಿಷಾಧಿಸಿದರು.
ತಾಲ್ಲೂಕು ಭಗೀರಥ ಉಪ್ಪಾರ ಸಂಘದ ವತಿಯಿಂದ ಮೆದೇಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪಾರಂಪರಿಕ ವೈದ್ಯರುಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದ ಪದ್ದತಿಯನ್ನು ಋಷಿಮುನಿಗಳು ತೋರಿಸಿಕೊಟ್ಟಿದ್ದಾರೆ. ಆಧುನಿಕ ಪದ್ದತಿ ಮೂಲಕ ಅನೇಕ ವಿಧವಾದ ಚಿಕಿತ್ಸೆಗಳಿದ್ದರೂ ಆಯುರ್ವೇದದ ಮಹತ್ವ ಭಾರತೀಯರಿಗೆ ಗೊತ್ತಿಲ್ಲದೆ ಇಂಗ್ಲಿಷ್ ಮೆಡಿಸನ್‍ಗೆ ಮಾರು ಹೋಗುತ್ತಿದ್ದಾರೆ.
ಆದರೆ ವಿದೇಶಿಗರು ಆಯುರ್ವೇದ ಹಾಗೂ ಯೋಗದ ಮಹತ್ವ ಅರಿತು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆಯುರ್ವೇದದಲ್ಲಿ ಯಾವುದೆ ಅಡ್ಡ ಪರಿಣಾಮ ಇಲ್ಲ ಎನ್ನುವುದನ್ನು ಮೊದಲು ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಪಾರಂಪರಿಕ ವೈದ್ಯರುಗಳು ಸದ್ದುಗದ್ದಲವಿಲ್ಲದೆ ಸೇವೆ ಸಲ್ಲಿಸುತ್ತ ಪುಣ್ಯದ ಕೆಲಸ ಮಾಡುತ್ತಿದ್ದಾರೆ, ವೈದ್ಯರುಗಳನ್ನು ದೇವರ ಸ್ವರೂಪದಲ್ಲಿ ಕಾಣುತ್ತೇವೆ. ಕೋವಿಡ್‍ನಂತ ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗು ತೊರೆದು ವೈದ್ಯರುಗಳು ರೋಗಿಗಳಿಗೆ ಚಿಕಿತ್ಸೆ ನೀಡಿದರು. ಮಾನಸಿಕ ಹಾಗೂ ದೈಹಿಕವಾಗಿ ಪ್ರತಿಯೊಬ್ಬರು ಆರೋಗ್ಯದಿಂದ ಇರಬೇಕಾದರೆ ಕ್ರಮವಾದ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳಬೇಕು.
ಸೇವಿಸುವ ಆಹಾರವೇ ಔಷಧಿಯಾಗಬೇಕು. ಆಗ ಯಾವ ಕಾಯಿಲೆಯು ಹತ್ತಿರ ಸುಳಿಯುವುದಿಲ್ಲ. ವ್ಯಾಪಾರಿ ಮನೋಭಾವ ಹಾಗೂ ವಿಷಪೂರಿತ ಆಹಾರ ಸೇವನೆಯಿಂದಾಗಿ ನಾನಾ ರೀತಿಯ ರೋಗಗಳು ಮನುಷ್ಯನನ್ನು ಕಾಡುತ್ತಿವೆ. ಬೆಳೆಗಳಿಗೆ ರಾಸಾಯನಿಕ ಹಾಗೂ ಕ್ರಿಮಿನಾಶಕಗಳನ್ನು ಸಿಂಪಡಿಸಿ ಭೂಮಿಯ ಫಲವತ್ತತೆಯನ್ನು ನಾಶಪಡಿಸಲಾಗುತ್ತಿದೆ. ಆದ್ದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್, ಗ್ಯಾಂಗ್ರಿನ್‍ನಂತ ರೋಗಗಳಿಗೆ ತುತ್ತಾಗಬೇಕಿದೆ ಎಂದರು.
ಶ್ರಮವಿಲ್ಲದೆ ಯಾಂತ್ರಿಕ ಜೀವನ ಜಾಸ್ತಿಯಾಗುತ್ತಿರುವುದರಿಂದ ಅನೇಕ ರೋಗ ರುಜಿನಗಳನ್ನು ತಂದುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಯೋಗ, ಧ್ಯಾನ, ವ್ಯಾಯಾಮ ಕಲಿಸಬೇಕು. ಪಾರಂಪರಿಕ ವೈದ್ಯರು ತಾವು ಕಲಿತಿರುವ ವಿದ್ಯೆಯನ್ನು ಬೇರೆಯವರಿಗೆ ಹೇಳಿಕೊಟ್ಟಾಗ ಮಾತ್ರ ಸಮಾಜಕ್ಕೆ ಉಪಯೋಗವಾಗುತ್ತದೆ. ಶಿಕ್ಷಣದ ಜೊತೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟಾಗ ಸನಾತನ ಧರ್ಮ ಉಳಿಯುತ್ತದೆ. ಕನ್ನಡ ನಾಡು, ನುಡಿ, ನೆಲ, ಜಲಕ್ಕೆ ಗಂಡಾಂತರ ಬಂದಾಗ ಪ್ರತಿಯೊಬ್ಬರು ಹೋರಾಟದ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದು ಮೆದೇಹಳ್ಳಿ ಗ್ರಾಮಸ್ಥರಲ್ಲಿ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮನವಿ ಮಾಡಿದರು.
ತಾಲ್ಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಸಿದ್ದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮೆದೇಹಳ್ಳಿ ಗ್ರಾಮದಲ್ಲಿ ಯಾವ ಪ್ರಚಾರವೂ ಇಲ್ಲದೆ ಪಾರಂಪರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸ್ವಾಮಿಜೀಗಳ ದಿವ್ಯಸಾನಿಧ್ಯದಲ್ಲಿ ಸನ್ಮಾನಿಸುವ ಅವಕಾಶ ನನಗೆ ಸಿಕ್ಕಿರುವುದು ಪುಣ್ಯ. ಮುಂದಿನ ದಿನಗಳಲ್ಲಿ ಇಂತಹ ಇನ್ನು ಅನೇಕರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಅಜ್ಜಣ್ಣ, ತಾಲ್ಲೂಕು ಭಗೀರಥ ಉಪ್ಪಾರ ಸಂಘದ ಗೌರವಾಧ್ಯಕ್ಷ ಗುರುಮೂರ್ತಿ ಇವರುಗಳು ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ದುಗ್ಗಪ್ಪ, ಪಾರಂಪರಿಕ ವೈದ್ಯರುಗಳಾದ ಶ್ರೀಮತಿ ಸುವರ್ಣಮ್ಮ, ಮಂಜುನಾಥ್ ಆರಾಧ್ಯ, ದಿನೇಶ್, ಶ್ರೀನಿವಾಸ್ ಇವರುಗಳು ವೇದಿಕೆಯಲ್ಲಿದ್ದರು.
ಶಿಕ್ಷಕ ಮುರಳಿ ನಿರೂಪಿಸಿದರು.