ಚಿತ್ರದುರ್ಗ. ನ.18: ಮಧುಮೇಹಿಗಳ ಕಣ್ಣಿನ ದೋಷಕ್ಕೆ ಲೇಸರ್ ಚಿಕಿತ್ಸೆ ಶಿಬಿರ ನಡೆಸಲಾಗುತ್ತಿದ್ದು, ಪ್ರತಿ ತಿಂಗಳು ಎರಡನೇ ಶುಕ್ರವಾರ ಜಿಲ್ಲಾಆಸ್ಪತ್ರೆ ಕೊಠಡಿ ಸಂಖ್ಯೆ 51ರಲ್ಲಿ ಶಿಬಿರ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಠಲ ಆಸ್ಪತ್ರೆ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಡಯಾಬೆಟಿಕ್ ರೆಥೆನೋಪತಿ ಶಿಬಿರದಲ್ಲಿ ಅವರು ಮಾತನಾಡಿದರು.
ಡಯಾಬಿಟಿಕ್ ರೆಟಿನೋಪತಿಯು ಮಧುಮೇಹದ ಪರಿಣಾಮವಾಗಿ ರೆಟಿನಾಕ್ಕೆ (ಕಣ್ಣಿನ ಹಿಂಭಾಗದಲ್ಲಿರುವ ಪಾರದರ್ಶಕ, ಬೆಳಕು-ಸೂಕ್ಷ್ಮರಚನೆ)ಹಾನಿಯಾಗಿದೆ. ರೆಟಿನಾದಲ್ಲಿನ ರಕ್ತನಾಳಗಳು ರಕ್ತ ಮತ್ತು ದ್ರವವನ್ನು ಸೋರಿಕೆ ಮಾಡಬಹುದು. ಹೊಸ ರಕ್ತನಾಳಗಳು ಬೆಳವಣಿಗೆಯಾಗಬಹುದು, ಕೆಲವೊಮ್ಮೆ ರಕ್ತಸ್ರಾವ, ಗಾಯದ ರಚನೆ ಅಥವಾ ರೆಟಿನಾದ ಬೇರ್ಪಡುವಿಕೆಗೆ ಕಾರಣವಾಗುತ್ತದೆ ಎಂದರು.
ಜಿಲ್ಲಾ ಆಸ್ಪತ್ರೆಯ ಹಿರಿಯ ನೇತ್ರ ತಜ್ಞ ಡಾ.ಬಿ.ಜಿ. ಪ್ರದೀಪ್ ಮಾತನಾಡಿ, ರಕ್ತದಲ್ಲಿನ ಹೆಚ್ಚಿನ ಮಟ್ಟದ ಸಕ್ಕರೆ (ಗ್ಲೂಕೋಸ್)ಗೆ ಪದೇ ಪದೇ ಒಡ್ಡಿಕೊಳ್ಳುವುದರಿಂದ ರೆಟಿನಾ ಸೇರಿದಂತೆ ಸಣ್ಣ ರಕ್ತನಾಳಗಳ ಗೋಡೆಗಳು ದುರ್ಬಲವಾಗುತ್ತವೆ ಮತ್ತು ಆದ್ದರಿಂದ ಹಾನಿಗೆ ಹೆಚ್ಚು ಒಳಗಾಗುತ್ತವೆ. ಹಾನಿಗೊಳಗಾದ ರೆಟಿನಾದ ರಕ್ತನಾಳಗಳು ರಕ್ತ ಮತ್ತು ದ್ರವವನ್ನು ರೆಟಿನಾಕ್ಕೆ ಸೋರಿಕೆ ಮಾಡುತ್ತವೆ ಎಂದರು.
ಶಿಬಿರದಲ್ಲಿ ಡಾ. ಪದ್ಮಪ್ರಿಯ, ಡಾ.ಡಿಂಪಲ್ ಹಾಗೂ ವಿಠಲ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಮತ್ತು ಹಿರಿಯ ನೇತ್ರಾಧಿಕಾರಿ ಕೆ.ಸಿ ರಾಮು, ಪುಷ್ಪಲತಾ, ಲಕ್ಷ್ಮಿ, ರವಿಕುಮಾರ್ ಮತ್ತು ರಮೇಶ್ ಇದ್ದರು.
ಶಿಬಿರದಲ್ಲಿ ಒಟ್ಟು 19 ಜನ ಫಲಾನುಭವಿಗಳನ್ನು ತಪಾಸಣೆ ನಡೆಸಲಾಯಿತು. ಮೂರು ಜನರಿಗೆ ಲೇಜರ್ ಚಿಕಿತ್ಸೆ ನೀಡಲಾಯಿತು. ಮೂರು ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ನೀಡಲಾಯಿತು.