ಬೆಂಗಳೂರು: ಆವಿಷ್ಕಾರ, ಸಂಶೋಧನೆಗಳಿಂದಲೇ ಪ್ರಗತಿ ಸಾಧ್ಯವಾಗಿದ್ದು, ಇದಕ್ಕಾಗಿ ಪ್ರತಿ ವಿಶ್ವವಿದ್ಯಾಲಯಗಳು ಸಂಶೋಧನಾ ಚಟುವಟಿಕೆಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಫಿಸಿಟಾಲ್ ಸೆಂಟರ್ ಆಫ್ ಅಕಾಡೆಮಿಕ್ಸ್ ಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಖಾಸಗಿ ವೈದ್ಯಕೀಯ ಕಾಲೇಜುಗಳು ಬಹಳಷ್ಟಿವೆ. ಆದರೆ ಚಿಕಿತ್ಸೆ, ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಕೋವಿಡ್ ಲಸಿಕೆಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಆವಿಷ್ಕಾರ ಮಾಡಿದೆ. ಅದೇ ರೀತಿ ನಮ್ಮಲ್ಲೂ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಆದ್ಯತೆ ನೀಡಬೇಕು. ಹಾಗೆಯೇ ಯುವಜನರು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅನೇಕ ಯುವಜನರು ವೈದ್ಯರಾಗಬೇಕೆಂದು ಮುಂದೆ ಬರುತ್ತಾರೆ. ಆದರೆ ಎಷ್ಟು ಜನರು ಸಂಶೋಧಕರಾಗಲು ಮುಂದೆ ಬರುತ್ತಾರೆ ಎಂದು ಚಿಂತನೆ ನಡೆಸಬೇಕಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರತಿ ರಾಜ್ಯದಲ್ಲಿ ಏಮ್ಸ್ ನಿರ್ಮಿಸಲು ಕ್ರಮ ವಹಿಸಿದೆ. ಪ್ರತಿ ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಬೇಕು. ಇದಕ್ಕಾಗಿ ರಾಜ್ಯದ ನಾಲ್ಕು ಕಡೆಗಳಲ್ಲಿ ಮೆಡಿಕಲ್ ಕಾಲೇಜುಗಳು ಶೀಘ್ರ ಆರಂಭವಾಗಿದೆ. ಇತ್ತೀಚೆಗೆ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಆರಂಭಿಸಲಾಗಿದೆ ಎಂದರು.
ಪ್ರತಿ ಜಿಲ್ಲೆಗಳಲ್ಲಿ ಹೃದಯ ಸಂಬಂಧಿ ಆರೋಗ್ಯ ಸೌಲಭ್ಯಗಳನ್ನು ನೀಡಬೇಕಿದೆ. ಜಯದೇವ ಆಸ್ಪತ್ರೆ ಯಾವುದೇ ಕಾರ್ಪೊರೇಟ್ ಸಂಸ್ಥೆಗೆ ಕಡಿಮೆ ಇಲ್ಲದಂತೆ ಬೆಳೆದಿದೆ. ಈ ಆಸ್ಪತ್ರೆಯಲ್ಲಿ ಸದಾ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ. ಅದೇ ರೀತಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಏಕೆ ಬೆಳೆಯುವುದಿಲ್ಲ ಎಂದು ಚಿಂತಿಸಬೇಕಿದೆ. ಪ್ರತಿ ವೈದ್ಯರು, ಆಡಳಿತ ಮಂಡಳಿ ಇದನ್ನು ಮಾದರಿಯಾಗಿಸಿ ಬದ್ಧತೆ, ಜವಾಬ್ದಾರಿ ವಹಿಸಿಕೊಂಡು ಆಸ್ಪತ್ರೆಯನ್ನು ಅಭಿವೃದ್ಧಿ ಮಾಡಬೇಕು ಎಂದರು.