ಪ್ರತಿಯೊಂದು ಮಗುವಿಗೂ ತಪ್ಪದೆ ಜಂತುಹುಳು ನಿವಾರಣಾ ಮಾತ್ರೆಯನ್ನು ನುಂಗಿಸಬೇಕು : ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ

2 Min Read

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ನ.20) : ತಾಲ್ಲೂಕಿನಾದ್ಯಂತ ನ.23 ರಿಂದ 27 ರವರೆಗೆ ಒಂದು ಲಕ್ಷ ಇಪ್ಪತ್ತ್ಮೂರು ಸಾವಿರದ ನೂರ ಮೂವತ್ತಾರು ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನುಂಗಿಸುವ ಗುರಿಯಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ತಿಳಿಸಿದರು.

ರಾಷ್ಟ್ರೀಯ ಜಂತುಹುಳು ನಿವಾರಣಾ ಪೂರ್ವಸಿದ್ದತೆಗಾಗಿ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣರವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ತಾಲ್ಲೂಕು ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.

19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ಅಲ್ಬೆಂಡಿಸಾಲ್ ನುಂಗಿಸುವ ರಾಷ್ಟ್ರೀಯ ಕಾರ್ಯಕ್ರಮ ಇದಾಗಿದ್ದು, ತಾಲ್ಲೂಕಿನಲ್ಲಿ 530 ಅಂಗನವಾಡಿಗಳಿದ್ದು, 1 ರಿಂದ ಐದು ವರ್ಷದೊಳಗಿನ 30847 ಮಕ್ಕಳಿದ್ದಾರೆ. 532 ಸರ್ಕಾರಿ/ಖಾಸಗಿ ಶಾಲೆಗಳಲ್ಲಿ ಒಂದರಿಂದ ಹತ್ತನೆ ತರಗತಿಗಳಲ್ಲಿ ಓದುತ್ತಿರುವ ಆರರಿಂದ ಹದಿನಾರು ವರ್ಷದೊಳಗಿನ 68487 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ನುಂಗಿಸಬೇಕಿದೆ ಎಂದು ಹೇಳಿದರು.

ಪಿ.ಯು.ಸಿ, ಡಿಪ್ಲಮೊ, ಐ.ಟಿ.ಐ, ನರ್ಸಿಂಗ್ ಇತರೆ 190 ಕಾಲೇಜುಗಳಲ್ಲಿ 23802 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನುಂಗಿಸಬೇಕಾಗಿರುವುದರಿಂದ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ರಾಷ್ಟ್ರೀಯ ಜಂತುಹುಳು ನಿವಾರಣಾ ತಾಲ್ಲೂಕು ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಕೋವಿಡ್ ನಿಯಂತ್ರಣಕ್ಕಾಗಿ ಚಿತ್ರದುರ್ಗ ತಾಲ್ಲೂಕಿನಾದ್ಯಂತ ಶೇ.99.05 ರಷ್ಟು ಲಸಿಕೆ ನೀಡಲಾಗಿದೆ. ಇಷ್ಟೊಂದು ಪ್ರಗತಿ ಸಾಧಿಸಲು ಎಲ್ಲಾ ಇಲಾಖೆಯವರು ಸಹಕರಿಸಿದ್ದೀರ. ಅದೇ ರೀತಿ ಜಂತುಹುಳು ನಿವಾರಣಾ ರಾಷ್ಟ್ರೀಯ ಕಾರ್ಯಕ್ರಮವಾಗಿರುವುದರಿಂದ ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಕೋವಿಡ್ ಮಾರ್ಗಸೂಚಿ ಅನ್ವಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಪ್ರತಿಯೊಂದು ಮಗುವಿಗೂ ತಪ್ಪದೆ ಜಂತುಹುಳು ನಿವಾರಣಾ ಮಾತ್ರೆಯನ್ನು ನುಂಗಿಸಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಈಶ್ವರಪ್ಪ ಮಾತನಾಡಿ ತಾಲ್ಲೂಕಿನ ಎಲ್ಲಾ ಶಾಲೆ ಶಿಕ್ಷಕರಿಗೆ ಸರಿಯಾದ ಮಾಹಿತಿಗಳನ್ನು ಒದಗಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಆ ದಿನ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಮೂಲಕ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಮಾತ್ರೆಗಳನ್ನು ನೀಡಿ.

ಸಮಾಜ ಕಲ್ಯಾಣಾಧಿಕಾರಿ ಹಾಗೂ ಬಿ.ಸಿ.ಎಂ.ಅಧಿಕಾರಿಗಳು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳಲ್ಲಿನ ಮಕ್ಕಳ ಸಂಖ್ಯೆಯನ್ನಾಧರಿಸಿ ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಮಾತ್ರೆಗಳನ್ನು ಪಡೆದು ಮಕ್ಕಳಿಗೆ ನುಂಗಿಸಿದ ನಂತರ ಸಂಪೂರ್ಣ ವರದಿಯನ್ನು ನೀಡಬೇಕೆಂದು ತಾಕೀತು ಮಾಡಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡುತ್ತ ಅಂಗನವಾಡಿಗಳಿಗೆ ಬರುವ ಒಂದರಿಂದ ಎರಡು ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಪುಡಿ ಮಾಡಿ ನುಂಗಿಸಬೇಕಲ್ಲದೆ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವಂತೆ ತಿಳಿಸಿದರು.
ಬಿ.ಸಿ.ಎಂ.ಅಧಿಕಾರಿ ಮುರಳಿ, ಮಹಿಳಾ ಮತ್ತು ಮಕ್ಕಳ ಸಹಾಯಕ ಅಭಿವೃದ್ದಿ ಅಧಿಕಾರಿ ಹತಿಕಾ ಬೇಗಂ, ಸಮಾಜ ಕಲ್ಯಾಣಾಧಿಕಾರಿ ಅನಿತ, ಡಾ.ಮಹೇಂದ್ರಕುಮಾರ್, ಡಾ.ವಾಣಿ, ಡಾ.ಸುಪ್ರಿತ, ಡಾ.ಮಂಜುಳ, ಆರೋಗ್ಯ ಸುರಕ್ಷಾಧಿಕಾರಿ ಪರ್ವಿನ್‍ಅಲಿ, ಹಬೀಬ್ ಇನ್ನು ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *