ರಾಮನಗರದಲ್ಲಿ `ಸ್ಕಿಲ್ ಹಬ್’ ಸ್ಥಾಪನೆ : ಅಶ್ವತ್ಥನಾರಾಯಣ

ಬೆಂಗಳೂರು: ಉದ್ಯಮರಂಗವು ಎದುರಿಸುತ್ತಿರುವ ಸಮಸ್ಯೆಗಳಿಗೆಲ್ಲ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿಹಾರವಿದ್ದು, ಇದರ ಅನುಷ್ಠಾನದಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಈ ವೇಳೆ ಎರಡು ದಿನಗಳ `ಉದ್ಯಮಿಯಾಗು, ಉದ್ಯೋಗ ನೀಡು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಯುವಜನರು ಲಭ್ಯ ಉದ್ಯೋಗಾವಕಾಶಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರಿಗೆ ಅಗತ್ಯ ತರಬೇತಿ ನೀಡಲು ರಾಮನಗರದಲ್ಲಿ `ಸ್ಕಿಲ್ ಹಬ್’ ಸ್ಥಾಪಿಸಲಾಗುವುದು ಎಂದು ಹೇಳಿದರು.

ದೇಶದಲ್ಲಿ ಉದ್ಯಮಶೀಲತೆಯನ್ನು ಸಂಭ್ರಮಿಸಬೇಕು ಮತ್ತು ಅದಕ್ಕೆ ಅಗತ್ಯವಾದ ಎಲ್ಲ ಬೆಂಬಲವನ್ನೂ ನೀಡಬೇಕು. ಪ್ರಧಾನಿ ಮೋದಿಯವರು ದೇಶದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಎನ್ಇಪಿ ಜಾರಿಗೆ ತೀರ್ಮಾನಿಸಿದ್ದಾರೆ. ಈ ನೀತಿಯ ಮೂಲಕ ದೇಶದಲ್ಲಿ ದಕ್ಷವಾದ ಉದ್ಯಮ ಸಂಸ್ಕೃತಿಯನ್ನು ಬೆಳೆಸಲಾಗುವುದು. ಇದಕ್ಕೆ ಪೂರಕವಾಗಿ ನಮ್ಮ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಹೆಸರಾಂತ ಕಂಪನಿಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಂಡು, ಮುಂದಡಿ ಇಡಲಾಗುವುದು ಎಂದು ಸಚಿವರು ಪ್ರತಿಪಾದಿಸಿದರು.

ನೂತನ ಶಿಕ್ಷಣ ನೀತಿಯಲ್ಲಿ ಅನುಭವಾತ್ಮಕ ಕಲಿಕೆ, ಪ್ರಾಜೆಕ್ಟ್ ಆಧಾರಿತ ಕಲಿಕೆ, ಸೇವೆಯ ಮೂಲಕ ಕಲಿಕೆ ಮತ್ತು ವೃತ್ತಿ ತರಬೇತಿಗಳಿರುವ ಸರ್ವಾಂಗೀಣ ಕಲಿಕೆಗೆ ಒತ್ತು ನೀಡಲಾಗಿದೆ. ಶಾಲೆಗೆ ಕಲಿಯಲು ಬರುವ ಮಗುವು ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಹಲವು ವೃತ್ತಿಗಳಿಗೆ ತನ್ನನ್ನು ತೆರೆದುಕೊಳ್ಳುವಂತೆ ಮಾಡುವ ಸದಾಶಯವನ್ನು ಇದು ಹೊಂದಿದೆ. ಅಂತಿಮವಾಗಿ ಈ ನೀತಿಯು 21ನೇ ಶತಮಾನದ ಅಗತ್ಯಗಳನ್ನು ಪೂರೈಸಲಿದೆ ಎಂದು ಹೇಳಿದರು.

ಕೈಗಾರಿಕಾ ರಂಗಕ್ಕೆ ಅಗತ್ಯ ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ನೀಡುವಲ್ಲಿ ಕರ್ನಾಟಕವು ದೇಶದಲ್ಲಿ ಎಂದಿಗೂ ಮುಂಚೂಣಿಯಲ್ಲಿದೆ. ಗ್ರಾಮೀಣ ಭಾಗಗಳಲ್ಲಿ ಉದ್ದಿಮೆಗಳು ನೆಲೆಯೂರುವಂತೆ ಮಾಡಲು ಇನ್ನು ಮುಂದೆಯೂ ಸರಕಾರವು ಈ ಕ್ಷೇತ್ರಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!