in ,

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಅಭಿವೃದ್ದಿ ನಿಗಮ ಸ್ಥಾಪಿಸಿ :  ಕಾಂ.ಜಿ.ಸಿ.ಸುರೇಶ್‍ಬಾಬು ಒತ್ತಾಯ

suddione whatsapp group join

 

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ಡಿ.10): ಕನಿಷ್ಟ ವೇತನ, ಸೇವಾ ಭದ್ರತೆಯಿಲ್ಲದೆ ಸಂಕಷ್ಟದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉಳಿಯಬೇಕಾದರೆ ಅಭಿವೃದ್ದಿ ನಿಗಮ ರಚನೆಯಾಗಬೇಕೆಂದು ಎ.ಐ.ಟಿ.ಸಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ಸರ್ಕಾರವನ್ನು ಒತ್ತಾಯಿಸಿದರು.

ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಐ.ಸಿ.ಡಿ.ಎಸ್.ಯೋಜನೆ ಬಂದು ನಲವತ್ತು ವರ್ಷಗಳಿಂದಲೂ ಕನಿಷ್ಟ ವೇತನ ಹಾಗೂ ಸೇವಾ ಭದ್ರತೆಗಾಗಿ ಹೋರಾಟ ಮಾಡಲಾಗುತ್ತಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಕೆ.ಎಸ್.ಆರ್.ಟಿ.ಸಿ, ಬಿ.ಎಸ್.ಎನ್.ಎಲ್, ನಿಗಮ ಸ್ಥಾಪಿಸಿರುವಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸಬೇಕು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ನಲವತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಈಗಾಗಲೆ ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳು ಏನೆ ಇದ್ದರೂ ನಮ್ಮ ಗಮನಕ್ಕೆ ತನ್ನಿ ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಎಲ್ಲದಕ್ಕೂ ಸಂಘಟನೆ ಅತಿ ಮುಖ್ಯ ಎಂದು ತಿಳಿಸಿದರು.

ಎ.ಐ.ಟಿ.ಯು.ಸಿ. ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ ಮಾತನಾಡಿ 1975 ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಐ.ಸಿ.ಡಿ.ಎಸ್.ಯೋಜನೆ ಜಾರಿಗೆ ತಂದಾಗಿನಿಂದಲೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕನಿಷ್ಟ ವೇತನ, ಸೇವಾ ಭದ್ರತೆಯಿಲ್ಲದೆ ದುಡಿಯುತ್ತಿದ್ದಾರೆ. 29 ಸಲ ಪಾರ್ಲಿಮೆಂಟ್, ವಿಧಾನಸೌಧದ ಎದುರು ಬೇಡಿಕೆಗಳ ಈಡೇರಿಕೆಗಾಗಿ ಚಳುವಳಿ ಮಾಡಿದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷಿಸುತ್ತಲೆ ಬರುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಐ.ಸಿ.ಡಿ.ಎಸ್.ಯೋಜನೆ ಆರಂಭವಾದಾಗ ಪೌಷ್ಟಿಕಾಂಶದ ಕೊರತೆಯಿಂದ ಅಂಗವಿಕಲತೆ ಹೆಚ್ಚಾಗುತ್ತಿತ್ತು. ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳ ಸಾವಿನ ಪ್ರಮಾಣ ಜಾಸ್ತಿಯಿತ್ತು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೆಲಸ ಆರಂಭಿಸಿದಾಗಿನಿಂದ ಎಲ್ಲರಿಗೂ ಪೌಷ್ಟಿಕಾಂಶ ಆಹಾರ ಸಿಗುತ್ತಿದೆ ಎಂದು ಮಾನವ ಸಂಪನ್ಮೂಲ ಸಚಿವರು ಹೇಳುತ್ತಿದ್ದಾರೆ.

ಇ.ಎಸ್.ಐ, ಕನಿಷ್ಟ ವೇತನವಿಲ್ಲ. ಹೋರಾಟ, ಚಳುವಳಿಯಿಂದ ಈಗ ಮಾಸಿಕ ಹತ್ತು ಸಾವಿರ ರೂ.ಗಳ ಗೌರವಧನ ಸಿಗುವಂತಾಗಿದೆ. ಸಾಮಾಜಿಕ ಭದ್ರತೆ, ಸೇವಾ ಹಿರಿತನದ ಆಧಾರದ ಮೇಲೆ ವೇತನ ಹಾಗೂ ನಿವೃತ್ತಿಯಾದವರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.

ಎ.ಐ.ಟಿ.ಯು.ಸಿ.ತಾಲ್ಲೂಕು ಅಧ್ಯಕ್ಷ ಟಿ.ಆರ್.ಉಮಾಪತಿ, ಅಂಗನವಾಡಿ ತಾಲ್ಲೂಕು ಅಧ್ಯಕ್ಷೆ ಜಮುನಾಭಾಯಿ, ಉಪಾಧ್ಯಕ್ಷೆ ರತ್ನಮ್ಮ, ಖಜಾಂಚಿ ಸಾವಿತ್ರಮ್ಮ, ಪ್ರಧಾನ ಕಾರ್ಯದರ್ಶಿ ಭಾಗ್ಯಮ್ಮ, ಜಿಲ್ಲಾ ಸಂಚಾಲಕ ಸತ್ಯಕೀರ್ತಿ ವೇದಿಕೆಯಲ್ಲಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಭಾರತದಲ್ಲಿ ಒಂದೊಂದು ಧರ್ಮಕ್ಕೆ ಒಂದೊಂದು ಕಾನೂನು ಏಕೆ ಬೇಕು? : ಪ್ರೊ.ಎನ್.ಡಿ.ಗೌಡ

3 ಕೋಟಿ ಮೌಲ್ಯದ ಚಿನ್ನಾಭರಣ ಕೊಟ್ಟ ತಿಮ್ಮಪ್ಪನ ಭಕ್ತ..!