ಚಿತ್ರದುರ್ಗ,(ಆ.22) : ಹಿರಿಯೂರಿನ ಮೇಟಿಕುರ್ಕೆ ಬಳಿ 1194 ಎಕರೆ ಭೂಮಿಯನ್ನು ರೈತರಿಂದ ಪಡೆದು, ಕೆ.ಐ.ಎ.ಡಿ.ಬಿ(ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ)ಯಿಂದ ಅಭಿವೃದ್ಧಿ ಮಾಡಲಾಗುತ್ತಿದೆ. ಜಿಂದಾಲ್, ಪ್ರಕಾಶ್ ಸ್ಪಾಂಜ್ ಐರನ್, ವಿಜಯದುರ್ಗ ಐರನ್ ಓರ್, ಇಂಡಸ್ಟ್ರೀಸ್ ಸೇರಿದಂತೆ 6 ಪ್ರತಿಷ್ಠಿತ ಉದ್ದಿಮೆದಾರರು ಶೀಘ್ರವೇ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮಾಡುವ ನಿರೀಕ್ಷೆ ಇದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ ಹೇಳಿದರು.
ನಗರದ ಐಶ್ವರ್ಯಫೋರ್ಟ್ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಚಿತ್ರದುರ್ಗ ಹಾಗೂ ಶಿವಮೊಗ್ಗ ಶಾಖಾ ಕಚೇರಿ ವತಿಯಿಂದ ಆಯೋಜಿಸಲಾದ “ಉದ್ದಿಮೆದಾರರ ಸಮಾವೇಶ”ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೈಗಾರಿಕೆಯಲ್ಲಿ ಹಿಂದುಳಿದ ಚಿತ್ರದುರ್ಗ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಚಿಂತಿಸಲಾಗುತ್ತಿದೆ. ಚಿತ್ರದುರ್ಗ ನಗರ ಹೊರತುಪಡಿಸಿ ಜಿಲ್ಲೆಯ ಬೇರೆ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಎಲ್ಲಿಯೂ ಕೈಗಾರಿಕೆ ಪ್ರದೇಶಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಎರಡು ವರ್ಷಗಳ ಕಾಲ ಸತತ ಪ್ರಯತ್ನ ಮಾಡಿ, ಹಿರಿಯೂರಿನ ಮೇಟಿಕುರ್ಕೆ ಬಳಿ ಕೈಗಾರಿಕೆ ಪ್ರದೇಶ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಮುಂದಿನ 6 ತಿಂಗಳ ಒಳಗಾಗಿ ಕೈಗಾರಿಕೆ ಪ್ರದೇಶ ಅಭಿವೃದ್ದಿ ಮಾಡಲಾಗುವುದು. ಮುಂದಿನ ಒಂದು ವರ್ಷದ ಒಳಗಾಗಿ ಈ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಲಿವೆ ಎಂದರು.
ಬಳ್ಳಾರಿಯ ವಿಜಯ್ ಮಿತ್ತಲ್ ಕಂಪನಿಯವರು ಸಹ ರೂ.500 ಕೋಟಿ ಹೂಡಿಕೆ ಮಾಡಲು ಸಿದ್ದರಿದ್ದಾರೆ. ಬೃಹತ್ ಕೈಗಾರಿಕೆಗಳು ಆಗಮಿಸಿದ ಪರಿಣಾಮವಾಗಿ ಜಿಲ್ಲೆಯ ಸಣ್ಣಪುಟ್ಟ ಕೈಗಾರಿಕೆಗಳಿಗೂ ಅನುಕೂಲವಾಗಿದೆ. ನೂತನ ಕೈಗಾರಿಕೆ ನೀತಿಯಲ್ಲಿ ಬಿಯ್ಯಾಂಡ್ ಬೆಂಗಳೂರಿಗೆ ಆದ್ಯತೆ ನೀಡಲಾಗಿದೆ. 2 ಹಾಗೂ 3 ನೇ ಹಂತ ನಗರದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗುವುದು. ಚೆನ್ನೈ ಬೆಂಗಳೂರು ಹೈವೆಯನ್ನು ರೂ. 50 ಸಾವಿರ ಕೋಟಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಚಳ್ಳಕೆರೆ ದೊಡ್ಡ ಉಳ್ಳಾರ್ತಿ ಬಳಿ 250 ಎಕೆರೆ ಕೈಗಾರಿಕೆ ಪ್ರದೇಶವನ್ನು ಕೆ.ಎಸ್.ಎಸ್.ಐ.ಡಿ.ಸಿ(ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ) ಅಭಿವೃದ್ಧಿ ಪಡಿಸಲಾಗಿದೆ. ಕೆ.ಐ.ಎ.ಡಿ.ಬಿ ಯಲ್ಲಿ ಪರಿಶಿಷ್ಠ ಜಾತಿಯವರಿಗೆ ಕೈಗಾರಿಕೆ ನಿವೇಶನ ಖರೀದಿಯಲ್ಲಿ ಶೇ.75 ರಷ್ಟು ರಿಯಾಯಿತಿಯನ್ನು ನೀಡಲಾಗುವುದು. ಇದೇ ಯೋಜನೆಯನ್ನು ಸಾಮಾನ್ಯ ಉದ್ದಿಮೆದಾರಿಗೂ ವಿಸ್ತರಿಸುವ ಬಗ್ಗೆ ನೂತನ ಕೈಗಾರಿಕೆ ನೀತಿಯಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಹಿಂದುಳಿದ ಪಟ್ಟಿಗೆ ಸೇರಿಸಿ ಸರ್ಕಾರದಿಂದ ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ನೆರವು ಪಡೆಯಲಾಗುವುದು ಎಂದು ಬಿ. ಆನಂದ್ ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕ ಲಕ್ಷ್ಮಣ ತಳವಾರ, ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 50 ಕೈಮಗ್ಗ ಸೊಸೈಟಿಗಳು ಇವೆ. 25 ವಿದ್ಯುತ್ ಚಾಲಿತ ಕೈಮಗ್ಗ ಘಟಕಗಳು ಇವೆ. ಕೈಮಗ್ಗ ಸೊಸೈಟಿಯಲ್ಲಿ 5760 ನೇಕಾರರು ಹಾಗೂ ವಿದ್ಯುತ್ ಚಾಲಿತ ಕೈಮಗ್ಗ ಘಟಕದಲ್ಲಿ 110 ಜನರು ಕೆಲಸನಿರ್ವಹಿಸುತ್ತಿದ್ದಾರೆ. ಸುಮಾರು ರೂ.76 ಕೋಟಿ ಹಣ ಜವಳಿ ಕೇತ್ರದಲ್ಲಿ ಹೂಡಿಕೆ ಆಗಿದೆ. ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಜವಳಿ ಇಲಾಖೆಯಿಂದ ಉತ್ತೇಜನ ನೀಡಲಾಗುತ್ತಿದ್ದು, ಎಸ್.ಸಿ. ಹಾಗೂ ಎಸ್.ಟಿ ವರ್ಗದವರಿಗೆ ಶೇ.75 ರಷ್ಟು ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತಿದೆ. ಹಿರಿಯೂರು ಬಳಿ ರೂ.27 ಕೋಟಿ ವೆಚ್ಚದಲ್ಲಿ ಬೈನರಿ ಅಪೆರಲ್ ಪಾರ್ಕ್ ಸ್ಥಾಪನೆಯಾಗಿದ್ದು, 3 ಘಟಗಳು ಕಾರ್ಯನಿರ್ವಹಿಸುತ್ತಿದ್ದು, 4600 ಜನರಿಗೆ ಉದ್ಯೋಗ ಮಾಡುತ್ತಿದ್ದಾರೆ.
2008-2013 ವರೆಗೆ ರಾಜ್ಯ ಸರ್ಕಾರ ಸುವರ್ಣ ವಸ್ತ್ರ ನೀತಿ, 2013 ರಿಂದ 20218 ರ ವರೆಗೆ ನೂತನ ಜವಳಿ ನೀತಿ, 2019 ರಿಂದ 2024ರ ವರೆಗೆ ಸಿದ್ದ ಉಡುಪು ನೀತಿ ಅನುಷ್ಠಾನ ನೀತಿಗಳನ್ನು ಜಾರಿಗೊಳಿಸಿದೆ. ಇದರ ಅಡಿ ಘಟಕ ಸ್ಥಾಪನೆಗೆ ಸಹಾಯಧನ, 5 ವರ್ಷದ ವರೆಗೆ ಉಚಿತ ವಿದ್ಯುತ್, ಪಿ.ಎಫ್. ಪಾವತಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್.ಎಫ್.ಸಿ ಪ್ರಧಾನ ವ್ಯವಸ್ಥಾಪಕ ಕೆ.ಮಲ್ಲಿಕಾರ್ಜುನ, ಉದ್ದಿಮೆದಾರರು ಹಾಗೂ ನವ ಉದ್ದಿಮೆದಾರರು ಸರ್ಕಾರದ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆದುಕೊಂಡು ಯಶಸ್ವಿಯಾಗಬೇಕು. ಕೆ.ಎಸ್.ಎಫ್.ಸಿ ಕಚೇರಿಯಲ್ಲಿ ಯಾವುದೇ ಮದ್ಯಸ್ಥಿಕೆದಾರರ ನೆರವು ಇಲ್ಲದೆ ನೇರವಾಗಿ ಶಾಖಾ ವ್ಯಸ್ಥಾಪಕರನ್ನು ಕಂಡು ತಮ್ಮ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಿ. ಚಿತ್ರದುರ್ಗ ಶಾಖೆಯ ಬಗ್ಗೆ ಯಾವುದಾದರೂ ದೂರಗಳು ಇದ್ದರೆ, ಕೇಂದ್ರ ಕಚೇರಿಯ ಗಮನಕ್ಕೆ ತನ್ನಿ. ಕರ್ನಾಟಕ ಹಣಕಾಸು ಸಂಸ್ಥೆ ಜನ ಸ್ನೇಹಿಯಾಗಿದ್ದು, ಸರ್ಕಾರ ಎಲ್ಲಾ ಯೋಜನೆಗಳ ಲಾಭವನ್ನು ಜನರಿಗೆ ತಲುಪಿಸುತ್ತಿದೆ. ರಾಷ್ಟ್ರೀಯ ಬ್ಯಾಂಕುಗಳಿಗಿಂತಲೂ ಹೆಚ್ಚಿನ ರೀತಿಯಲ್ಲಿ ಉದ್ದಿಮೆದಾರರಿಗೆ ಉಪಯೋಗವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಉದ್ದಿಮೆದಾರರ ಸಮಸ್ಯೆಗಳ ಕುರಿತು ಸಂವಾದ ನಡೆಸಲಾಯಿತು.
ಉದ್ದಿಮೆದಾರರ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಚಿತ್ರದುರ್ಗ ಶಾಖಾ ವ್ಯವಸ್ಥಾಪಕ ಆರ್.ಬಾಬು, ಶಿವಮೊಗ್ಗ ಶಾಖಾ ವ್ಯವಸ್ಥಾಪಕ ಕೆ.ಎನ್.ಲಿಂಗಪ್ಪ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಚಿತ್ರದುರ್ಗ ಶಾಖಾ ಉಪ ವ್ಯವಸ್ಥಾಪಕ ಸತ್ಯನಾರಾಯಣ ಹಾಗೂ ಸಿಬ್ಬಂದಿ ವರ್ಗದವರು, ಉದ್ದಿಮೆದಾರರು ಇದ್ದರು.