ಚಿತ್ರದುರ್ಗ: ಜಾತಿ ವ್ಯವಸ್ಥೆ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯತನಕ ಸಮಾನತೆಯನ್ನು ತರಲು ಸಾಧ್ಯವಿಲ್ಲ ಎಂದು ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ.ದುರುಗೇಶ್ ತಿಳಿಸಿದರು.
ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಸಮಿತಿ ಹಾಗೂ ಕಾನೂನು ಪರ್ಯಾಯ ವೇದಿಕೆ ವತಿಯಿಂದ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿ-2015 ರ ಮಾಹಿತಿ ಕಾರ್ಯಾಗಾರವನ್ನು ಡಾ.ಬಿ.ಆರ್.ಅಂಬೇಡ್ಕರ್ ಭಾಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮೇಲು-ಕೀಳು ಎನ್ನುವ ಮನೋಭಾವನೆ ಇನ್ನು ಮನಸ್ಸಿನಿಂದ ಹೋಗಿಲ್ಲ. ದಲಿತರ ಮೇಲೆ ಜಾತಿ ನಿಂದನೆ, ದಬ್ಬಾಳಿಕೆ, ದೌರ್ಜನ್ಯ, ಹಲ್ಲೆ, ಅತ್ಯಾಚಾರಗಳು ಹಿಂದಿನಿಂದಲೂ ನಡೆಯುತ್ತಲೇ ಇದೆ. ಸವರ್ಣಿಯರಿಂದ ದಲಿತರು ಅನುಭವಿಸುವ ನೋವನ್ನು ತಡೆಗಟ್ಟುವುದಕ್ಕಾಗಿ ರಾಜೀವ್‍ಗಾಂಧಿ ಪ್ರಧಾನಿಯಾಗಿದ್ದಾಗ ಎಸ್ಸಿ, ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯಿದೆಯನ್ನು ಜಾರಿಗೆ ತಂದರು. ಆದರೂ ಇನ್ನು ಪರಿಣಾಮಕಾರಿಯಾಗಿ ಆಗುತ್ತಿಲ್ಲ.
ಇದರಿಂದ ದಲಿತರಿಗೆ ನ್ಯಾಯ ಸಿಗದಂತಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದಾಗ ಪೊಲೀಸರು ಎಫ್.ಐ.ಆರ್.ಹಾಕಿದ ಮೇಲೆ ಆರು ತಿಂಗಳಿಂದ ಐದು ವರ್ಷಗಳ ಕಾಲ ಜೈಲು ಆಗಬೇಕು. ಆದರೆ ಪ್ರಭಾವಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಕೀಲರು ಹಾಗೂ ಬೆಂಗಳೂರು ಎ.ಎಲ್.ಎಫ್.ನ ಶಿವಮಣಿಧನ್ ಮಾತನಾಡಿ ದಲಿತರ ಮೇಲೆ ಸಾಕಷ್ಟು ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ, ಅತ್ಯಾಚಾರಗಳು ನಡೆಯುತ್ತಿದ್ದರೂ ದಲಿತರು ಇನ್ನು ಏಕೆ ಮುಗ್ದರಾಗಿದ್ದಾರೆನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ದಲಿತರ ಮೇಲೆ ಯಾರಾದರೂ ದೌರ್ಜನ್ಯ ನಡೆಸಿದಾಗ ದಲಿತ ಸಂಘರ್ಷ ಸಮಿತಿಗಳು ಪ್ರತಿಭಟನೆ ನಡೆಸುತ್ತವೆ. ಲಾಕ್‍ಡೌನ್ ಸಂದರ್ಭದಲ್ಲಿ ಕೆಂಪಯ್ಯ ಎನ್ನುವ ದಲಿತನನ್ನು ಹತ್ಯೆಗೈಯಲಾಯಿತು.
ಹಾಸನ, ಚಿಕ್ಕಮಗಳೂರಿನಲ್ಲಿಯೂ ದಲಿತರ ಕೊಲೆಯಾಗಿದೆ. ಎಸ್ಸಿ, ಎಸ್ಟಿ.ದೌರ್ಜನ್ಯ ತಡೆ ಕಾಯಿದೆಯಡಿ ಜಾತಿ ನಿಂದನೆ ಮಾಡಿದವರಿಗೆ ಜಾಮೀನು ಸಿಗಬಾರದು. ಬರ್ಬರವಾಗಿ ಕೊಲೆಯಾದ ದಲಿತನ ಕುಟುಂಬಕ್ಕೆ ಇನ್ನು ನ್ಯಾಯ ಸಿಕ್ಕಿಲ್ಲ. ಹೃದಯಾಘಾತ ಎಂದು ಸಂಬಂಧಪಟ್ಟ ಠಾಣೆಯವರು ಬಿ.ರಿಪೋರ್ಟ್ ನೀಡಿದ್ದಾರೆ. ಅದಕ್ಕಾಗಿ ದಲಿತರಲ್ಲಿ ಕಾನೂನಿನ ಅರಿವಿರಬೇಕು ಎಂದು ಜಾಗೃತಿಗೊಳಿಸಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ವೀಕ್ ಆಗಿರುವುದರಿಂದ ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇಂತಹ ಅಪಾಯಕಾರಿ ಸಂದರ್ಭಗಳಲ್ಲಿ ಕೆಲವೆ ಕೆಲವು ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಡಿದಾಗ ಅಂತಹವರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ದಲಿತರು ಕಾನೂನು ಅರಿವು ಮೂಡಿಸಿಕೊಂಡು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕೆಂದು ಮನವಿ ಮಾಡಿದರು.
ಎಸ್.ಜೆ.ಕೆ.ಸಮಿತಿ ರಾಜ್ಯ ಸಮಿತಿ ಸದಸ್ಯ ಕೆ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಹೆಚ್.ಮಹಂತೇಶ್, ದಲಿತ ಮುಖಂಡ ಬಿ.ರಾಜಪ್ಪ, ಮಹಲಿಂಗಪ್ಪ ಕುಂಚಿಗನಹಾಳ್, ಪ್ರಗತಿಪರ ಚಿಂತಕ ನರೇನಹಳ್ಳಿ ಅರುಣ್‍ಕುಮಾರ್, ತಿಪ್ಪೇಸ್ವಾಮಿ ಮೈಲನಹಳ್ಳಿ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಗುತ್ತಿಗೆದಾರ ಬ್ಯಾಲಹಾಳ್ ಜಯಪ್ಪ ಸೇರಿದಂತೆ ಅನೇಕ ದಲಿತ ಮಹಿಳೆಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.