ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಜುಲೈ28) : ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾಣೆಗೆ, ಕ್ರಾಂತಿಗೆ ಹೊಸ ಶಿಕ್ಷಣ ನೀತಿ ಸಹಕಾರಿಯಾಗಿದ್ದು, ಪ್ರಾಯೋಗಿಕ ಹಾಗೂ ಅನ್ವಯಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಆರ್. ಡ್ಯಾನಿಯಲ್ ರತನ್ ಕುಮಾರ್ ಹೇಳಿದರು.
ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ-2020ರ 3ನೇ ವರ್ಷಾಚರಣೆ ಕಾರ್ಯಕ್ರಮದ ಅಂಗವಾಗಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಮಕ್ಕಳಲ್ಲಿರುವ ವಿಶಿಷ್ಟ ಸಾಮಾಥ್ರ್ಯವನ್ನು ಹೊರತರಲು ಪ್ರಯತ್ನಿಸುತ್ತದೆ. ಕಪ್ಪು ಹಲಗೆ ಬಳಿಸಿ ಬೋಧನೆ ಮಾಡುವ ಬದಲಿಗೆ ಪ್ರಾಯೋಗಿಕ ಕಲಿಗೆ ಒತ್ತು ನೀಡಿದೆ.
ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮದ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಗುಣಮಟ್ಟದ ಶಿಕ್ಷಣದ ಬಗ್ಗೆ ಒತ್ತು ಕೊಡುವುದು ಗಮನಾರ್ಹ. ಮಕ್ಕಳು ಆಡುತ್ತಾ ನಲಿಯುತ್ತಾ ಕಲಿಯಬೇಕು. ಆಟ, ಯೋಗ, ಚಿತ್ರಕಲೆ, ಸಂಗೀತ, ಶಿಕ್ಷಣದ ಬಹುಮುಖ್ಯ ಭಾಗಗಳಾಗಬೇಕು ಎಂಬ ಎನ್‍ಇಪಿ ಆಶಯ ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ತಂದಿದೆ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಶಿಕ್ಷಕರನ್ನು ಸನ್ನದ್ಧಗೊಳಿಸಲಾಗಿದೆ. ನಿರಂತರ ತರಬೇತಿಗಳನ್ನು ಸಹ ನೀಡಲಾಗುತ್ತಿದೆ. ಭಾಷೆ ಕಲಿಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ವೃತ್ತಿ ತರಬೇತಿಯನ್ನು ಸಹ ಶಿಕ್ಷಣದ ಹಂತದಲ್ಲಿ ನೀಡಲು ಅವಕಾಶವಿದ್ದು, ಉಡುವಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಬಡಗಿ ವೃತ್ತಿಯನ್ನು ಮಕ್ಕಳಲಿಗೆ ಕಲಿಸಲು ಪ್ರಯತ್ನಿಸಲಾಗುವುದು. ಈಗ ಸದ್ಯ ವಿದ್ಯಾಲಯದಲ್ಲಿ 239 ಹುಡುಗರು ಹಾಗೂ 195 ಹುಡುಗಿಯರು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 23 ಬೋದಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 6 ರಿಂದ 12 ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಜವಾಹರ್ ನವೋದಯ ವಿದ್ಯಾಲಯದ ಉಪ ಪ್ರಾಂಶುಪಾಲೆ ಶ್ರೀಮತಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದು ಮೂರು ವರ್ಷಗಳು ತುಂಬಿವೆ. ದೇಶದ ಶಿಕ್ಷಣವನ್ನು ಕಾಲಕ್ಕೆ ತಕ್ಕಂತೆ ಬದಲಿಸಬೇಕು ಎಂಬ ಮುಖ್ಯ ಆಶಯದೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಬಂದಿದೆ. ವಿದ್ಯಾರ್ಥಿಗಳಿಗೆ ಚಟುವಟಿಕೆ ಯುಕ್ತ ಬೋಧನೆ, ಕೌಶಲ್ಯಾಭಿವೃದ್ಧಿ ಶಿಕ್ಷಣ ನೀಡುವಂತಾಗಬೇಕು ಎಂಬುದು ಇದರ ಮುಖ್ಯ ಆಶಯವಾಗಿದೆ ಎಂದರು.
ಹಿರಿಯೂರಿನ ಗಂಗಾ ಸೆಂಟ್ರಲ್‍ನ ಪ್ರೌಢಶಾಲೆಯ ಪ್ರಾಂಶುಪಾಲೆ ಶೈಲಜಾ ಮಾತನಾಡಿ, ಹೊಸ ಶಿಕ್ಷಣ ನೀತಿಯು ಶಿಕ್ಷಣದ ಸ್ವರೂಪ ಮತ್ತು ಪಠ್ಯಕ್ರಮದ ಅವಶ್ಯಕತೆಗಳನ್ನು 5+3+3+4 ವಿನ್ಯಾಸಕ್ಕೆ ಆಧರಿಸಿ, 5 ವರ್ಷಗಳ ಅಡಿಪಾಯ ಹಂತ (2ನೇ ತರಗತಿವರೆಗೆ) 3 ವರ್ಷಗಳ ಪೂರ್ವಸಿದ್ದತಾ ಹಂತ (3 ರಿಂದ 5) 3 ವರ್ಷಗಳ ಮಧ್ಯಮ ಹಂತ ( 6 ರಿಂದ 8) ಮತ್ತು 4 ವರ್ಷಗಳ ದ್ವಿತೀಯ ಹಂತ (9 ರಿಂದ 12 ರವರೆಗೆ) ಮಾಡಲಾಗಿದೆ ಎಂದರು.
ಅಂತರ್ ವಿಷಯ ಕಲಿಕೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ವೃತ್ತಿಪರ ತರಬೇತಿ ನೀಡಲಾಗುತ್ತಿದೆ. ಉನ್ನತ ಶಿಕ್ಷಣದಲ್ಲಿ 4 ವರ್ಷಗಳ ಪದವಿ ವ್ಯಾಸಂಗ ಇರಲಿದ್ದು, ಇದನ್ನು ಡಿಪ್ಲೋಮೊ, ಪದವಿ ಹಂತಗಳಾಗಿ ವಿಭಾಗಿಸಲಾಗಿದೆ. ಅರ್ಧದಲ್ಲಿ ಪದವಿ ವ್ಯಾಸಂಗ ಮೊಟಕುಗೊಳಿಸುವ ವಿದ್ಯಾರ್ಥಿಗಳಿಗೆ ಡಿಪ್ಲೋಮೋ ಪ್ರಮಾಣ ಪತ್ರ ದೊರೆಯಲಿದೆ. ಇದರ ಜೊತಗೆ ಸಂಶೋಧನೆ ಹಾಗೂ ನ್ಯಾವಿನ್ಯತೆಗೆ ಒತ್ತು ನೀಡಲಾಗಿದೆ. ತಂತ್ರಜ್ಞಾನ ಶಿಕ್ಷಣಕ್ಕೆದ ಜೊತೆಗೆ ವೃತ್ತಿಪರ ಕೌಶಲ್ಯ ಅಭಿವೃದ್ಧಿಗೂ ಗಮನ ಹರಿಸಲಾಗಿದೆ. ಒಟ್ಟಾರೆ ಎಲ್ಲಾ ಹಂತದ ಶಿಕ್ಷಣದಲ್ಲೂ ಸಮಗ್ರ ನೋಟವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ ಎಂದರು.
ಚಿತ್ರದುರ್ಗ ಎಸ್‍ಜೆಎಂ ಶಾಲೆಯ ಶಿಕ್ಷಕ ನಾಗರಾಜ್ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಕ್ಕಳ ಕೇಂದ್ರೀಕೃತವಾಗಿದೆ. ಇದನ್ನು ರಾಷ್ಟ್ರಾದ್ಯಂತ ಜಾರಿಗೊಳಿಸಲಾಗಿದೆ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿಕ ಬದಲಾಗಿದೆ. ದೇಶದ 140 ಕೋಟಿ ಜನರಿಗೂ ಗುಣಮಟ್ಟದ ನೀಡುವ ಆಶಯ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಇಲಾಖೆಯ ವೇಣುಗೋಪಾಲ.ಪಿ.ಎಂ. ಜವಾಹರ್ ನವೋದಯ ವಿದ್ಯಾಲಯದ ಶಿಕ್ಷಕರಾದ ಆಂಟೋನಿ ಸ್ಟ್ಯಾನ್ಲಿ, ರೇಣು ರಾಯ್ ಸೇರಿದಂತೆ ಇತರರು ಇದ್ದರು.