ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 01 : ಚೆಸ್ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಲೆಂಬ ಉದ್ದೇಶವಿಟ್ಟುಕೊಂಡು ಬೆಳಗಾಂ ಜಿಲ್ಲೆಯ ಬೆಳ್ಳಂಗಿಯ ರಾಹುಲ್ ಭೀಮರಾವ್ ಕಾಂಬ್ಳಿ ಬೆಳಗಾಂನಿಂದ ಚೆನ್ನೈಗೆ ಸೈಕಲ್ ಯಾತ್ರೆ ಹೊರಟಿದ್ದಾರೆ.
ನ.23 ರಂದು ಬೆಳಗಾಂನಿಂದ ಏಕಾಂಗಿಯಾಗಿ ಸೈಕಲ್ ಏರಿದ ರಾಹುಲ್ ಭೀಮರಾವ್ ಕಾಂಬ್ಳಿ ಶನಿವಾರ ರಾತ್ರಿ ಚಿತ್ರದುರ್ಗಕ್ಕೆ ಆಗಮಿಸಿ ಎಸ್.ಆರ್.ಎಸ್.ಕಾಲೇಜಿನಲ್ಲಿ ತಂಗಿದ್ದು, ಭಾನುವಾರ ಬೆಳಿಗ್ಗೆ ಒನಕೆ ಓಬವ್ವ ಪ್ರತಿಮೆ ಸಮೀಪದಿಂದ ಶಿರಾ ಕಡೆ ಸೈಕಲ್ ಪ್ರಯಾಣ ಬೆಳೆಸಿದರು.
ಮಳೆ, ಚಳಿ, ಗಾಳಿಯಿಂದ ರಕ್ಷಿಸಿಕೊಳ್ಳಲು ತಲೆಗೆ ಹೆಲ್ಮೇಟ್, ಧೂಳು ಬೀಳದಂತೆ ಕಣ್ಣಿಗೆ ಗ್ಲಾಸ್, ಹಾಗೂ ಬೆಚ್ಚನೆಯ ಉಡುಪು ಧರಿಸಿ ಹೊರಟಿರುವ ರಾಹುಲ್ ಭೀಮರಾವ್ ಕಾಂಬ್ಳಿ ದಾರಿ ಮಧ್ಯದಲ್ಲಿ ಎಲ್ಲಾದರೂ ಸೈಕಲ್ ಪಂಕ್ಚರ್ ಆದರೆ ರೆಡಿ ಮಾಡಿಕೊಳ್ಳುವ ಎಲ್ಲಾ ಸಲಕರಣೆಗಳನ್ನಿಟ್ಟುಕೊಂಡಿದ್ದೇನೆ. ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಅನೇಕರು ನೆರವು ನೀಡುತ್ತಿದ್ದಾರೆಂದು ಉಪಕಾರವನ್ನು ಸ್ಮರಿಸಿದರು.
ದಿನಕ್ಕೆ 75 ಕಿ.ಮೀ.ನಷ್ಟು ದೂರ ಸಾಗುತ್ತೇನೆ. ಒಂದು ತಿಂಗಳ ಕಾಲ 950 ಕಿ.ಮೀ. ಸವೆಸಿ ಚೆನ್ನೈ ತಲುಪಿ ವಿಶ್ವನಾಥ್ ಆನಂದ್ ಡಿ.ಗುಕೇಶ್, ಪ್ರಜ್ಞಾನಂದ ಇವರುಗಳನ್ನು ಭೇಟಿಯಾಗಿ ಗ್ರಾಮೀಣ ಮಟ್ಟದಲ್ಲಿ ಚೆಸ್‍ಗೆ ಹೆಚ್ಚಿನ ಒತ್ತು ನೀಡುವಂತೆ ಮನವಿ ಮಾಡಲಿದ್ದೇನೆ.
ಚೆಸ್ ಆಡುವುದರಿಂದ ಬುದ್ದಿಶಕ್ತಿ ಚುರುಕಾಗಿ ಏಕಾಗ್ರತೆ ಮೂಡುತ್ತದೆ. ಕ್ರಿಕೆಟ್ ಮತ್ತಿತರೆ ಕ್ರೀಡೆಗಳಿಗೆ ಸಿಕ್ಕಂತ ಪ್ರೋತ್ಸಾಹ ಚೆಸ್‍ಗೂ ಸಿಗಬೇಕು. ಯುವ ಪೀಳಿಗೆ ಹೆಚ್ಚು ಸಮಯವನ್ನು ಮೊಬೈಲ್ ಗೇಮ್‍ನಲ್ಲಿ ಕಳೆಯುವ ಬದಲು ಚೆಸ್ ಕಡೆ ಆಸಕ್ತಿ ವಹಿಸಬೇಕು. ಸರ್ಕಾರ ಕೂಡ ಚೆಸ್‍ನ್ನು ಮುನ್ನೆಲೆಗೆ ತರಬೇಕೆಂಬುದು ನನ್ನ ಆಸೆ. ಹಾಗಾಗಿ ಸೈಕಲ್ ಯಾತ್ರೆ ಹೊರಟಿದ್ದೇನೆ. ಶಿರಾ, ತುಮಕೂರು, ಬೆಂಗಳೂರು, ಕೆ.ಜಿ.ಎಫ್, ವೆಲ್ಲೂರು, ಕಾಂಚಿಪುರಂ ಮೂಲಕ ಚೆನ್ನೈ ತಲುಪಿ ಅಲ್ಲಿ ಪ್ರಮುಖ ಚೆಸ್ ಆಟಗಾರರನ್ನು ಭೇಟಿಯಾಗಿ ನಶಿಸುತ್ತಿರುವ ಚೆಸ್ ಕುರಿತು ಚರ್ಚಿಸುತ್ತೇನೆಂಬ ಅನಿಸಿಕೆ ವ್ಯಕ್ತಪಡಿಸಿದರು.