ಮೈಸೂರು: ಒಮ್ಮೊಮ್ಮೆ ಕಾಡಿನಿಂದ ನಾಡಿಗೆ ಗಜರಾಜನೇನಾದ್ರೂ ಬಂದ್ರೆ ಅವನ ರಂಪಾಟ ಹೆಚ್ಚಾಗಿಯೇ ಇರುತ್ತೆ. ರೈತರ ಬೆಳೆಯನ್ನು ನೋಡೋದಿಲ್ಲ, ಆಸ್ತಿ ಪಾಸ್ತಿಯನ್ನು ನೋಡೋದಿಲ್ಲ. ತಾನು ನಡೆದದ್ದೇ ದಾರಿ ಅಂತ ನಡೆದುಕೊಂಡು ಹೋಗ್ತಾ ಇರುತ್ತೆ. ಆದ್ರೆ ಈ ಬಾರಿ ಪ್ರತ್ಯಕ್ಷವಾದ ಗಜರಾಜ ಮಾಡಿದ್ದು ಮಾತ್ರ ಭಿನ್ನ ವಿಭಿನ್ನ. ಅಲ್ಲಿದ್ದವರಿಗೆ ಕೈಕಾಲು ನಡುಗುವುದರ ಜೊತೆಗೆ ಜೀವನದ ಭಯವೂ ಆಗಿತ್ತು.
ಹುಣಸೂರು-ಹೆಚ್ ಡಿ ಕೋಟೆ ರಸ್ತೆಯಲ್ಲಿರುವ ಗುರುಪುರ ಟಿಬೆಟ್ ಕ್ಯಾಂಪ್ ಬಳಿ ಆನೆಯೊಂದು ತನ್ನ ರಂಪಾಟ ಶುರು ಮಾಡಿತ್ತು. ಅದು ಹೇಗೆ ಅಂದ್ರೆ ಕರೆಂಟ್ ಜೊತೆಗೇನೆ ಆಟವಾಡೋದಕ್ಕೆ ಹೋಗಿದೆ. ಇದನ್ನ ಕಂಡವರು ಆತಂಕಕ್ಕೊಳಗಾಗಿದ್ದಂತು ಸತ್ಯ.
ರಸ್ತೆ ಮಧ್ಯೆ ಇದ್ದ ಕರೆಂಟ್ ಕಂಬಕ್ಕೆ ಆನೆ ಡಿಕ್ಕಿ ಹೊಡೆದಿದೆ. ಅನೆ ಹೊಡೆದ ಡಿಕ್ಕಿಯ ರಭಸಕ್ಕೆ ಕಂಬದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಷ್ಟೇ ಅಲ್ಲ ಸ್ಥಳೀಯರನ್ನು ಕಂಡು ಓಡಿಸಿಕೊಂಡು ಹೋಗಿದೆ. ಆನೆಯ ರಂಪಾಟಕ್ಕೆ ಜನ ಸುಸ್ತೆದ್ದು ಹೋಗಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿ, ಆನೆಯನ್ನ ಸೆರೆಹಿಡಿಯುವಂತೆ ಮಾಡಿದ್ದಾರೆ. ಈ ಆನೆ ನಾಗರಹೊಳೆ ಅರಣ್ಯದಿಂದ ಬಂದಿದ್ದು ಎನ್ನಲಾಗಿದೆ. ಆನೆಯ ರಂಪಾಟಕ್ಕೆ ಅಲ್ಲಿದ್ದ ಜನ ಒಂದು ಕ್ಷಣ ಜೀವ ಕೈನಲ್ಲಿಡಿದುಕೊಂಡು ತಪ್ಪಿಸಿಕೊಂಡಿದ್ದಂತು ಸತ್ಯ.