ಏಪ್ರಿಲ್ 1 ರಿಂದ 13 ರವರೆಗೆ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ

2 Min Read

ಸುದ್ದಿಒನ್, ಚಿತ್ರದುರ್ಗ : ಏಪ್ರಿಲ್ 1 ರಿಂದ 13 ರವರೆಗೆ ನಡೆಯುವ ಏಕನಾಥೇಶ್ವರಿ ಅಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಕೋಟೆ ರಸ್ತೆಯಲ್ಲಿರುವ ಏಕನಾಥೇಶ್ವರಿ ಪಾದಗುಡಿಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.

 

ಏಕನಾಥೇಶ್ವರಿ ದೇವಿಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಗೋವಿಂದರಾಜ್ ಪ್ರತಿ ವರ್ಷ ನೀವುಗಳು ಹೇಗೆ ಜಾತ್ರೆ ನಡೆಸಿಕೊಂಡು ಹೋಗುತ್ತೀರೋ ಅದೇ ರೀತಿ ಪದ್ದತಿಯಂತೆ ಆಚರಿಸಿ. ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ. ಹದಿಮೂರು ದಿನಗಳ ಕಾಲ ಜಾತ್ರೆ ಶಾಂತಿಯುತವಾಗಿ ನಡೆಯಬೇಕು. ಅದಕ್ಕೆ ಬೇಕಾದ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಿ. ನಿಮ್ಮ ಜೊತೆ ತಾಲ್ಲೂಕು ಆಡಳಿತವಿರುತ್ತದೆ ಎಂದು ಭರವಸೆ ನೀಡಿದರು.

ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿ ನಿರ್ದೇಶಕ ಬಿ.ರಾಮಜ್ಜ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುವುದು. ಏ.1 ರಂದು ಜಾತ್ರೆಯ ಸಾರು ಹಾಕಲಾಗುತ್ತದೆ. ಹದಿಮೂರಕ್ಕೆ ಹೋಕಳಿಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಇಡಿ ಚಿತ್ರದುರ್ಗ ನಗರದ ಎಲ್ಲರೂ ಸೇರಿ ಏಕನಾಥೇಶ್ವರಿ ಅಮ್ಮನ ಜಾತ್ರೆಯನ್ನು ಶಾಂತಿಯಿಂದ ಆಚರಿಸೋಣ. ಇದಕ್ಕೆ ನಿಮ್ಮ ಸಹಕಾರವಿರಲಿ ಎಂದು ತಹಶೀಲ್ದಾರ್‍ರವರಲ್ಲಿ ವಿನಂತಿಸಿದರು.


ಕೋಮಲ ನರ್ಸಿಂಗ್ ಹೋಂನ ಡಾ.ಕೋಮಲ ಮರಿಗುದ್ದಿರವರು ಹತ್ತು ಲಕ್ಷ ರೂ. ವೆಚ್ಚ ಮಾಡಿ ಏಕನಾಥೇಶ್ವರಿ ಪಾದಗುಡಿಯ ಮುಂಭಾಗ ಧ್ವಾರಬಾಗಿಲು ನಿರ್ಮಿಸಿದ್ದಾರೆ. ಅದಕ್ಕಾಗಿ ಜಾತ್ರೆಯಲ್ಲಿ ಅವರನ್ನು ಗೌರವಿಸುವಂತೆ ಸಲಹೆ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡುತ್ತ ದಾವಣಗೆರೆಯಲ್ಲಿ ದುರ್ಗಮ್ಮನ ಜಾತ್ರೆ ಹೇಗೆ ವೈಭವೋಪೇತವಾಗಿ ನಡೆಯುತ್ತದೋ ಅದೇ ರೀತಿ ಚಿತ್ರದುರ್ಗದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಏಕನಾಥೇಶ್ವರಿ ಅಮ್ಮನವರ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸೋಣ. ತಾಲ್ಲೂಕು ಕಚೇರಿ, ನಗರಸಭೆ ಹಾಗೂ ವಿದ್ಯುತ್ ಇಲಾಖೆಯವರು ಹದಿಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಬಿ.ಎಲ್. ಮಲ್ಲಿಕಾರ್ಜುನ್ ಮಾತನಾಡಿ ನಗರ ದೇವತೆ ತಿಪ್ಪಿನಘಟ್ಟಮ್ಮ-ಬರಗೇರಮ್ಮನವರ ಭೇಟಿ ಮಹೋತ್ಸವ ಹಿಂದಿನ ಕಾಲದಿಂದಲೂ ರಾಜಬೀದಿ ದೊಡ್ಡಪೇಟೆಯಲ್ಲಿ ನಡೆಯುತ್ತಿದೆ. ಭೇಟಿ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಕಿಷ್ಕಿಂದೆಯಾಗಿರುವ ದೊಡ್ಡಪೇಟೆ ರಸ್ತೆಯಲ್ಲಿ ಸಾವಿರಾರು ಭಕ್ತರು ಜಮಾಯಿಸುತ್ತಾರೆ. ಅದಕ್ಕಾಗಿ ಅಪ್ಪಣೆ ಕೇಳಿ ಭೇಟಿ ಮಹೋತ್ಸವವನ್ನು ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಸಿದರೆ ಇಡಿ ದುರ್ಗದ ಜನತೆಯೇ ನೋಡಿ ಸಂಭ್ರಮಿಸುತ್ತಾರೆಂದು ಸಲಹೆ ನೀಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುವುದಕ್ಕೆ ಎಲ್ಲರ ಸಹಕಾರ ಅತಿ ಮುಖ್ಯ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮಾಜಿ ಸದಸ್ಯರುಗಳಾದ ಗಾಡಿ ಮಂಜುನಾಥ್, ಸಿ.ಟಿ.ರಾಜೇಶ್, ತಾಲ್ಲೂಕು ಕಚೇರಿಯ ರಾಜಸ್ವ ನಿರೀಕ್ಷಕ ಪ್ರಾಣೇಶ್, ಗ್ರಾಮ ಆಡಳಿತಾಧಿಕಾರಿ ಶ್ರೀನಿವಾಸ್ ಇವರುಗಳು ವೇದಿಕೆಯಲ್ಲಿದ್ದರು.

ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಓಂಕಾರ್, ಗುತ್ತಿಗೆದಾರ ಕುಮಾರ್, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ‌ಡಿ.ಗೋಪಾಲಸ್ವಾಮಿನಾಯಕ, ಶಾರದ ಬ್ರಾಸ್ ಬ್ಯಾಂಡ್‍ನ ಗುರುಮೂರ್ತಿ ಸೇರಿದಂತೆ ನೂರಾರು ಭಕ್ತರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *