ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಪ್ರತಿದಿನ ಮೊಟ್ಟೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ. ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಅಜೀಮ್ ಪ್ರೇಮ್ ಜೀ ಅನುದಾನವೂ ವಾರದಲ್ಲಿ ನಾಲ್ಕು ದಿನ ಮೊಟ್ಟೆ ಒದಗಿಸುತ್ತದೆ ಎಂದು ತಿಳಿಸಿದ್ದಾರೆ.
ನಾನು ಈಗಷ್ಠೆ ಪ್ರತಿಷ್ಠಾನದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಬಂದಿದ್ದೇನೆ. ಮಕ್ಕಳಿಗೆ ಪ್ರತಿದಿನ ಒಂದು ಮೊಟ್ಟೆಯನ್ನು ವಾರದ ನಾಲ್ಕು ದಿನ ವಿತರಿಸಲಿದ್ದಾರೆ ಎಂದಿದ್ದಾರೆ. ಆದರೆ ಯಾವಾಗಿನಿಂದ ಈ ಕಾರ್ಯ ಆರಂಭವಾಗಬಹುದು ಎಂಬ ಬಗ್ಗೆ ಮಾತ್ರ ಮಾಹಿತಿ ನೀಡಲಿಲ್ಲ.
ಮಕ್ಕಳಿಗೆ ಬೇಕಾದ ಪೌಷ್ಠಿಕಾಂಶ ಒದಗಿಸಲು ಶಿಕ್ಷಣಾ ಇಲಾಖೆ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ಅಜಿಂ ಪ್ರೇಮ್ ಜೀ ಫೌಂಡೇಷನ್ ಕೈ ಜೋಡಿಸಿದೆ. ಇದಕ್ಕಾಗಿ 1,500 ಕೋಟಿ ದೇಣಿಗೆ ನೀಡಲು ಫೌಂಡೇಷನ್ ಮುಂದೆ ಬಂದಿದೆ. ಈಗಾಗಲೇ ಸರ್ಕಾರ ಹಾಗೂ ಅಜೀಂ ಪ್ರೇಮ್ ಜೀ ನಡುವೆ ಈ ಸಂಬಂಧ ಔಪಚಾರಿಕ ಒಪ್ಪಂದಕ್ಕೆ ಸಹಿ ಬಿದ್ದಿದೆ. ಇನ್ಮುಂದೆ ಮಕ್ಕಳಿಗೆ ಬೇಕಾದ ಪೌಷ್ಠಿಕಾಂಶ ಈ ಮೂಲಕ ಸಿಗಲಿದೆ.
ಈಗ ಸದ್ಯಕ್ಕೆ 1 ರಿಂದ 10ನೇ ತರಗತಿಯಲ್ಲಿನ ಮಕ್ಕಳಿಗೆ ವಾರದಲ್ಲಿ ಎರಡು ಬಾರಿ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಶೇಂಗಾ ಚಿಕ್ಕಿ, ಬಾಳೆ ಹಣ್ಣನ್ನು ವಿತರಣೆ ಮಾಡಲಾಗುತ್ತಿತ್ತು. ವಾರದಲ್ಲಿ ಆರು ದಿನ ಮೊಟ್ಟೆ ವಿತರಣೆಯ ಪ್ರಸ್ತಾಪ ಸರ್ಕಾರದ ಮುಂದೆ ಇತ್ತು. ಆದರೆ ಹಣದ ಕೊರತೆಯಿಂದಾಗಿ ಅದನ್ನು ಅನುಷ್ಠಾನಗೊಳಿಸಲು ಇಲಾಖೆಗೆ ಸಾಧ್ಯವಾಗಿರಲಿಲ್ಲ. ಇದೀಗ ಮಕ್ಕಳ ಆರೋಗ್ಯದ ವಿಚಾರಕ್ಕೆ ಅಜಿಂ ಪ್ರೇಮ್ ಜೀ ಫೌಂಡೇಷನ್ ಕೈ ಜೋಡಿಸಿದೆ.