ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 16 : ಮುಂದಿನ ದಿನಗಳಲ್ಲಿ ಮಾರುಕಟ್ಟೆ ವಿಸ್ತರಿಸಿ ಹಾಲು ಹಾಗೂ ಬೆಣ್ಣೆಗೆ ಹೆಚ್ಚಿನ ದರ ನೀಡುವ ಚಿಂತನೆಯಿಂದ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ್ ಭರವಸೆ ನೀಡಿದರು.
ತ.ರಾ.ಸು.ರಂಗಮಂದಿರದಲ್ಲಿ ಸೋಮವಾರ ನಡೆದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಿಂದ ಜಿಲ್ಲೆಯ ಆರು ತಾಲೂಕಿನ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳಿಗಾಗಿ ನಡೆದ ಪ್ರಾದೇಶಿಕ ಸಭೆ ಉದ್ಗಾಟಿಸಿ ಮಾತನಾಡಿದರು.
ಹಾಲಿನ ಪೌಡರ್ ಹಾಗೂ ಬೆಣ್ಣೆ ಸ್ಟಾಕ್‍ಯಿದ್ದು, ದರ ಕಡಿಮೆಯಾಗಿದೆ. ಒಂದು ಕೆ.ಜಿ. ಹಾಲಿನ ಪೌಡರ್ ಸಿದ್ದಪಡಿಸಲು ಹನ್ನೊಂದು ಲೀ.ಹಾಲು ಬೇಕಾಗುತ್ತದೆ. ಮೂವತ್ತಾರು ರೂ.ಗೆ ಒಂದು ಲೀ.ಹಾಲು ಖರೀದಿಸುತ್ತಿದ್ದು, 391 ರೂ.ಬೇಕಾಗುತ್ತದೆ. ಒಂದು ಕೆ.ಜಿ.ಪೌಡರನ್ನು ಮಾರಾಟ ಮಾಡಿದರೆ 180 ರೂ. ನಷ್ಟವಾಗುತ್ತಿದೆ. ಹಾಲಿನ ಬೇಡಿಕೆ ನೋಡಿಕೊಂಡು ದರ ಏರಿಕೆ ಮಾಡಲಾಗುವುದು. ಬೆಣ್ಣೆಯೂ ಸಹ ಸ್ಟಾಕ್ ಇದೆ. ಆದರೆ ರೇಟ್ ಇಲ್ಲ. ಒಟ್ಟಾರೆ ಹಾಲು, ಪೌಡರ್ ಮತ್ತು ಬೆಣ್ಣೆ ದರ ಕುಸಿದಿರುವುದರಿಂದ ಒಕ್ಕೂಟ ನಷ್ಟದಲ್ಲಿರುವುದನ್ನು ಸರಿದೂಗಿಸುವ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು.
ಶಿವಮೊಗ್ಗ, ದಾವಣಗೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಜಿ.ಬಿ.ಶೇಖರ್ ಮಾತನಾಡಿ ರೈತರಿಗೆ ಅನುಕೂಲವಾಗಬೇಕಾಗಿರುವುದರಿಂದ ಜಿಲ್ಲೆಯಲ್ಲಿ ಹೊಸ ಹಾಲಿನ ಸೊಸೈಟಿಗಳು ಆರಂಭವಾಗಬೇಕು. ಜಾನುವಾರುಗಳಿಗೆ ವಿಮೆ ಮಾಡಿಸಿದರೆ ಆಕಸ್ಮಿಕವಾಗಿ ರಾಸುಗಳು ಮೃತಪಟ್ಟಾಗ ಪರಿಹಾರ ದೊರಕುತ್ತದೆ. ರೈತರು ಗುಣಮಟ್ಟದ ಹಾಲನ್ನು ಸಹಕಾರ ಸಂಘಕ್ಕೆ ಕೊಡಬೇಕೆಂದು ಮನವಿ ಮಾಡಿದರು.
ರೈತರಿಗೆ ಕಷ್ಟವಾಗಬಾರದನ್ನುವ ಕಾರಣಕ್ಕೆ ಹಾಲಿನ ದರವನ್ನು ಜಾಸ್ತಿ ಮಾಡಬೇಕೆಂದು ಒಕ್ಕೂಟದ ಅಧ್ಯಕ್ಷರಿಗೆ ಸಲಹೆ ನೀಡಿದರು.
ನಿರ್ದೇಶಕರುಗಳಾದ ರೇವಣಸಿದ್ದಪ್ಪ, ಸಂಜೀವಮೂರ್ತಿ, ರವಿಕುಮಾರ್, ಶೇಖರ್, ಶಿವಮೊಗ್ಗ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಮುರಳಿಧರ್, ಉಪ ವ್ಯವಸ್ಥಾಪಕ ಕುಮಾರಸ್ವಾಮಿ ವೇದಿಕೆಯಲ್ಲಿದ್ದರು.