ಚಿತ್ರದುರ್ಗ. ಫೆ.19 : ಜಿಲ್ಲೆಯಲ್ಲಿ ಶಿಶು ಮತ್ತು ತಾಯಿ ಮರಣ ಪ್ರಮಾಣ ನಿಯಂತ್ರಣಕ್ಕೆ ಪರಿಣಾಮಕಾರಿ ಹಾಗೂ ಸೂಕ್ತ ಯೋಜನೆ ರೂಪಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ ನೀಡಿದರು.

ನಗರದ ಐಶ್ವರ್ಯ ಫೋರ್ಟ್ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆಹೆಚ್‍ಪಿಟಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಐಸಿಎಂಆರ್ ಪ್ರಾಜೆಕ್ಟ್ ಲಾಂಚ್ ಹಾಗೂ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಮಗುವಿಗೆ ಹುಟ್ಟಿನಿಂದ 1000 ದಿನಗಳ ಜೀವಿತಾವಧಿ ಅತ್ಯಂತ ಪ್ರಮುಖ ಘಟ್ಟವಾಗಿದೆ. ಈ ಅವಧಿಯಲ್ಲಿ ಮಗುವಿನ ದೈಹಿಕ, ಮಾನಿಸಿಕ ಬೆಳವಣಿಗೆ ಪ್ರಮುಖ ಹಂತ ದಾಟುವುದರಿಂದ, ಮಗುವಿನ ಸಮಗ್ರ ಆರೋಗ್ಯ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಶಿಶು ಮರಣ, ತಾಯಿ ಮರಣ ನಿಯಂತ್ರಣಕ್ಕಾಗಿ ಈಗಾಗಲೆ ಸರ್ಕಾರ ಹಲವಾರು ಕಾರ್ಯಕ್ರಮಗಳು, ಯೋಜನೆಗಳು, ಜಾಗೃತಿ ಕಾರ್ಯಕ್ರಮಗಳು ಜಾರಿಯಲ್ಲಿದ್ದರೂ, ಇನ್ನೂ ಶಿಶು ಹಾಗೂ ತಾಯಿ ಮರಣಕ್ಕೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾಯಿ ಮರಣ, ಶಿಶು ಮರಣ ಕುರಿತು ಸಮಗ್ರವಾಗಿ ಚರ್ಚೆಯಾಗಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಈಗಾಗಲೆ ಗ್ರಾಮ ಆರೋಗ್ಯ ಕಾರ್ಯಕ್ರಮವಿದೆ. ಉದ್ಯೋಗಖಾತ್ರಿ ಯೋಜನೆಯಲ್ಲಿ ಮಹಿಳಾ ಕೂಲಿ ಕಾರ್ಮಿಕರ ಮಕ್ಕಳ ಹಿತಕಾಯಲು ಕೂಸಿನ ಮನೆ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೂರಕ ಪೌಷ್ಠಿಕ ಆಹಾರ, ಅಪೌಷ್ಠಿಕತೆ ನಿವಾರಣೆ ಕಾರ್ಯಕ್ರಮಗಳು ಕೂಡ ಜಾರಿಯಲ್ಲಿವೆ. ಆರೋಗ್ಯ ಇಲಾಖೆಯಲ್ಲಿಯೂ ಕೂಡ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಆದಾಗ್ಯೂ ಶಿಶು ಮರಣ, ತಾಯಿ ಮರಣ ಸಂಭವಿಸುವುದು ತಪ್ಪಿಲ್ಲ. ಅಪೌಷ್ಠಿಕ ಮಕ್ಕಳು, ಬೆಳವಣಿಗೆಯಲ್ಲಿ ಕುಂಠಿತ ಇರುವ ಮಕ್ಕಳು, ಕಡಿಮೆ ತೂಕದ ಮಕ್ಕಳು ಜಿಲ್ಲೆಯ ಎಲ್ಲೆಡೆ ಪತ್ತೆಯಾಗುತ್ತಾರೆ. ಹೀಗಾಗಿ ವ್ಯವಸ್ಥೆ ಹಾಗೂ ಯೋಜನೆಗಳ ಪರಿಣಾಮಕಾರಿ ಜಾರಿಯಲ್ಲಿನ ಲೋಪದೋಷಗಳನ್ನು ಪತ್ತೆ ಮಾಡುವ ಕಾರ್ಯ ಆಗಬೇಕಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮಟ್ಟದಲ್ಲಿ ಯೋಜನೆಗಳ ಗ್ರೌಂಡ್‍ಲೆವೆಲ್ ಫೀಡ್ ಬ್ಯಾಕ್ ಪಡೆಯುವುದು ಅಗತ್ಯವಾಗಿದೆ. ಇದರಿಂದಾಗಿ ಪರಿಹಾರ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರಮಟ್ಟದ ವೈದ್ಯಾಧಿಕಾರಿಗಳು ಈ ತರಬೇತಿಯ ಪ್ರಯೋಜನ ಪಡೆದು ಶಿಶು ಮರಣ ದರ, ತಾಯಿ ಮರಣ ದರ ನಿಯಂತ್ರಿಸಲು ಸೂಕ್ತ ಯೋಜನೆ ತಯಾರಿಸಿ ಎಂದು ಹೇಳಿದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ. ಅಭಿನವ್ ಮಾತನಾಡಿ, ತಾಯಿ ಮರಣ, ಶಿಶು ಮರಣ ತಪ್ಪಿಸುವುದು, ಗರ್ಭಿಣಿಯರು, ಮಕ್ಕಳಲ್ಲಿನ ರಕ್ತಹೀನತೆ ಮತ್ತು ಅಪೌಷ್ಟಿಕತೆ ತೊಲಗಿಸುವುದು ಆರೋಗ್ಯ ಇಲಾಖೆಯ ಪ್ರಮುಖ ಆದ್ಯತೆ ಆಗಬೇಕು. ಈ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಗಾರಗಳು ಉಪಯುಕ್ತವಾಗಿವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ಪೆÇೀಷಣ್ ಅಭಿಯಾನ ಜಾರಿಯಲ್ಲಿದ್ದು, ಅಪೌಷ್ಟಿಕ ಮಕ್ಕಳನ್ನು ಗುರುತಿಸುವ, ಚಿಕಿತ್ಸೆ ಕೊಡಿಸುವ ಕೆಲಸ ನಮ್ಮ ಅಂಗನವಾಡಿ ಕೇಂದ್ರಗಳ ಮೂಲಕ ನಡೆಯುತ್ತಿದೆ. ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಸಹಕಾರ ನೀಡಿ ಮಗುವಿನ ಜೀವಿತದ ಪ್ರಥಮ ಸಾವಿರ ದಿನಗಳನ್ನು ತಾಯಿ ಮಗು ಉಳಿವಿಗಾಗಿ, ತರಬೇತಿಯ ನಂತರ ಕ್ರಿಯಾ ಯೋಜನೆ ತಯಾರಿಸಿ ಒಗ್ಗೂಡಿ ಕೆಲಸ ಮಾಡೋಣ ಎಂದರು.
ಸೆಂಟ್ ಜಾನ್ಸ್ ಆಸ್ಪತ್ರೆಯ ಡಾ.ಸುಮನ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ತರಬೇತಿ ಕಾರ್ಯಗಾರದ ಉದ್ದೇಶ ಮತ್ತು ಇತರೆ ವಿಷಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಪಿ ರೇಣುಪ್ರಸಾದ್, ಸೆಂಟ್ ಜಾನ್ಸ್ ರಿಸರ್ಚ್ ಇನ್ಸಿಟ್ಯೂಟ್ ಕೋ ಡೈರೆಕ್ಟರ್ ಡಾ.ಮರಿಯನ್, ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮುಖಸ್ಥ ಹಾಗೂ ಪ್ರಾಧ್ಯಾಪಕ ಟಿಂಕುಥಾಮಸ್, ಕೆಹೆಚ್‍ಪಿಟಿ ಐಸಿಎಂಆರ್ ಟೆಕ್ನಿಕಲ್ ಲೀಡ್ ಡಾ.ಪ್ರಾರ್ಥನಾ, ಸೀನಿಯರ್ ಮ್ಯಾನೇಜರ್ ಡಾ.ಆಯುಷ, ಐಸಿಎಂಆರ್ ಪ್ರಾಜೆಕ್ಟ್ ಜಿಲ್ಲಾ ಸಂಯೋಜಕಿ ಬಿ.ವೀಣಾ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳು, ಸೆಂಟ್ ಜಾನ್ಸ್ ಆಸ್ಪತ್ರೆಯ ಸಿಬ್ಬಂದಿಗಳು, ಕೆಹೆಚ್‍ಪಿಟಿ ಸಿಬ್ಬಂದಿಗಳು ಇದ್ದರು.

