ಬೆಂಗಳೂರು: ಚಳಿಗಾಲದ ನಡುವೆ ಮಳೆಗಾಲವೂ ಮೈನಡುಗಿಸುತ್ತಿದೆ. ತಮಿಳುನಾಡು ಹಾಗೂ ಆಂಧ್ರ ಕರಾವಳಿ ಪ್ರದೇಶದಲ್ಲಿ ಅಪ್ಪಳಿಸಿರುವ ಚಂಡಮಾರುತದ ಪರಿಣಾಮದಿಂದಾಗಿ ಕರ್ನಾಟಕದ ಹಲವೆಡೆ ಮಳೆ ಮುಂದುವರೆದಿದೆ. ಬೆಳಗ್ಗೆಯಿಂದಾನೇ ಹಲವೆಡೆ ಮಳೆಯಾಗಿದೆ. ಇನ್ನು ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ.
ಇಂದಿನಿಂದ ಡಿಸೆಂಬರ್ 28ರವರೆಗೂ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಬಿದರ್, ಬೆಳಗಾವಿ, ಧಾರವಾಡ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗದಲ್ಲಿ ಮಳೆಯಾಗಲಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಚಳಿಯ ಪ್ರಮಾಣ ಕೊಂಚ ತಗ್ಗಿದೆ. ಆದರೆ ಹೀಗೆ ಮಳೆಯೂ ಬಂದರೆ ಚಳಿ ಇನ್ನಷ್ಟು ಜಾಸ್ತಿಯಾಗಲಿದೆ. ಬೆಳಗ್ಗೆಯೇ ಚಿತ್ರದುರ್ಗ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ.ಇನ್ನೂ ತುಮಕೂರು ಭಾಗದಲ್ಲಿ ಕೂಡಾ ತುಂತುರು ಮಳೆಯಾಗಿದೆ. ಬೆಂಗಳೂರಿನಲ್ಲೂ ಸೋನೆ ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಈ ವಾತಾವರಣದಿಂದ ಬೆಳಗ್ಗೆನೆ ಏಳುವುದಕ್ಕೂ ಜನ ಕಷ್ಟ ಪಡುವಂತಾಗಿದೆ.
ಈ ವಾತಾವರಣ ಇನ್ನು ಮೂರು ದಿನಗಳ ಕಾಲ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನ ಚಂಡಮಾರುತದ ಎಫೆಕ್ಟ್ ಕರ್ನಾಟಕದ ಮೇಲೂ ಬಿದ್ದಿದ್ದು, ಮೂರು ಅಥವಾ ಐದು ದಿನಗಳ ಕಾಲ ಮಳೆಯಾಗಲಿದೆ. ಇನ್ನು ದಾವಣಗೆರೆಯಲ್ಲಿ 16.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿರುವ ಬಗ್ಗೆ ಹವಮಾನ ಇಲಾಖೆ ಮಾಹಿತಿ ನೀಡಿದೆ. ಹೊರಗೆ ಹೋಗುವಾಗ ಜನ ಚಳಿ ಹಾಗೂ ಮಳೆ ಎರಡಕ್ಕೂ ಮುಂಜಾಗ್ರತ ಕ್ರಮ ಕೈಗೊಂಡು ಹೋಗುವುದು ಬೆಟರ್.