ಚಿತ್ರದುರ್ಗ,( ಸೆ.09) : 21ನೇ ಶತಮಾನ ಜ್ಞಾನಾಧಾರಿತ ಹಾಗೂ ಪ್ರತಿಭೆ ಆಧಾರಿತವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹಾಗೂ ಕೌಶಲ್ಯ ಪಡೆದುಕೊಂಡರೆ ಜಗತ್ತಿನಲ್ಲಿ ಏಲ್ಲಾದರೂ ಜೀವನ ರೂಪಿಸಿಕೊಳ್ಳಬಹುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದರು.
ಹಿರಿಯೂರು ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಡಿಜಿಟಲ್ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ 150 ಕೋಟಿ ವೆಚ್ಚದಲ್ಲಿ 450 ಕಾಲೇಜುಗಳಿಗೆ 27 ಸಾವಿರ ಕಂಪ್ಯೂಟರ್ ನೀಡಲಾಗಿದೆ. ಸರ್ಕಾರಿ ಕಾಲೇಜುಗಳ 9 ಸಾವಿರ ತರಗತಿ ಕೊಠಡಿಗಳಲ್ಲಿ 2,500 ಕೊಠಡಿಗಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ನೀಡಿದ್ದು, ಡಿಸೆಂಬರ್ ಒಳಗೆ ಎಲ್ಲಾ ಕೊಠಡಿಗಳಿಗೆ ಈ ಸೌಲಭ್ಯ ನೀಡಲಾಗುವುದು ಎಂದರು. ಯಾವುದೇ ಶಿಫಾರಸು ಇಲ್ಲದೇ ನ್ಯಾಯಯುತವಾಗಿ ವರ್ಗಾವಣೆ ನೀತಿ ಜಾರಿಗೊಳಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ವಿದ್ಯಾರ್ಥಿಗಳ ಹಾಗೂ ಯುವಕರ ಸ್ನೇಹಿ ಆಡಳಿತವನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದರು.
ಹಿರಿಯೂರು ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್ ಮಾತನಾಡಿ, ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿಗೆ ಡಿಎಂಎಫ್ ಅನುದಾನದಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ರೈತರ ಪರಿಶ್ರಮದಿಂದ ಕಟ್ಟಿದ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ಕೆಲವು ಕೊಠಡಿಗಳು ದುರಸ್ತಿಯಲ್ಲಿದ್ದು, ಹೆಚ್ಚಿನ ಅನುದಾನ ನೀಡಬೇಕು. ಜತೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ವ್ಯಾಸಂಗ ಮಾಡುತ್ತಿರುವ ವೇದಾವತಿ, ವಾಣಿ ಸಕ್ಕರೆ, ಜವನಗೊಂಡನಹಳ್ಳಿ ಹಾಗೂ ಹರಿಯಬ್ಬೆ ಪದವಿ ಕಾಲೇಜುಗಳ ಮೂಲಸೌಕರ್ಯ ಹಾಗೂ ಅಭಿವೃದ್ಧಿಗೆ ಸಹಕಾರ ನೀಡುವಂತೆ ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ರಾಜಶೇಖರ್ ಹೆಬ್ಬಾರ್, ನಗರಸಭೆ ಸದಸ್ಯರಾದ ಸಣ್ಣಪ್ಪ, ಬಾಲಕೃಷ್ಣ, ಸಿಡಿಸಿ ಸದಸ್ಯೆ ಶೋಭಾ, ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿಯ ವಿಜಯ್‌ಕುಮಾರ್, ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ, ಹನುಮಂತರಾಯ, ವಾಸುದೇವ, ವಿಷ್ಣು ಮತ್ತಿತರರು ಇದ್ದರು.