ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 02 : ಆನ್ಲೈನ್ ಬೆಟ್ಟಿಂಗ್ ಆಪ್ ಗೆ ಅಕ್ರಮ ಹಣ ವರ್ಗಾವಣೆಯ ಆರೋಪ ಹೊತ್ತಿರುವ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಳ್ಳಕೆರೆ ಪಟ್ಟಣದಲ್ಲಿರುವ ನಿವಾಸದ ಮೇಲೆ ದಾಳಿಯಾಗಿದೆ. ವೀರೇಂದ್ರ ಪಪ್ಪಿ ಅವರು ಶ್ರೀಲಂಕಾ, ನೇಪಾಳ ಮತ್ತು ಜಾರ್ಜಿಯಾ ದೇಶಗಳ ಕೆಲ ಶೆಲ್ ಕಂಪನಿಗಳು ಮತ್ತು ಕ್ಯಾಸಿನೊದೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಮತ್ತೆ ಶೋಧ ಕಾರ್ಯ ಶುರು ಮಾಡಿದ್ದಾರೆ.
ಸೈಬರ್ ವಂಚನೆಯ ಹಣವನ್ನು ಬಳಸಿಕೊಂಡು ಕ್ರೆಡಿಟ್ ಕಾರ್ಡ್ ಪಾವತಿ ತೋರಿಸುವ ಮುಖಾಂತರ ವೀರೇಂದ್ರಗೆ ಸೇರಿದ ಕ್ಯಾಸಿನೋಗಳ ನಗದು ಹಣವನ್ನು ಕಾನೂನು ಬದ್ಧ ಆದಾಯವಾಗಿ ಪರಿವರ್ತಿಸಿರುವ ಶಂಕೆಯೂ ವ್ಯಕ್ತವಾಗಿದೆ. ಇ.ಡಿ.ಶೋಧನೆ ವೇಳೆ ವೀರೇಂದ್ರ ಸಾಗರೋತ್ತರ ವ್ಯವಹಾರ ನಡೆಸುತ್ತಿರುವ ಸಂಬಂಧ ಕೆಲ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಹೀಗಾಗಿ ಇ.ಡಿ. ಅಧಿಕಾರಿಗಳು ಈ ಶೆಲ್ ಕಂಪನಿಗಳು ಹಾಗೂ ಸಾಗರೋತ್ತರ ವ್ಯವಹಾರದ ಬಗ್ಗೆ ಕೆ.ಸಿ.ವೀರೇಂದ್ರ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇತ್ತೀಚೆಗಷ್ಟೇ ಚಿತ್ರದುರ್ಗದಲ್ಲಿರುವ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಒಂದಷ್ಟು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದರು. ಹಣ, ಚಿನ್ನಾಭರಣವನ್ನೆಲ್ಲಾ ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನ ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಲಾಗುತ್ತಿದೆ. ಇದಕ್ಕೆಲ್ಲಾ ನಮ್ಮ ಬಳಿ ದಾಖಲೆಗಳಿದಾವೆ. ಅವರು ಕೇಳಿದಕ್ಕೆಲ್ಲ ಉತ್ತರ ಕೊಡುತ್ತೇವೆ ಅಂತ ಕೂಡ ವೀರೇಂದ್ರ ಪಪ್ಪಿ ಅವರ ಸಹೋದರ ಮಾಹಿತಿ ನೀಡಿದ್ದರು. ಈಗ ನೋಡಿದರೆ ಎರಡನೇ ಬಾರಿ ಇಡಿ ದಾಳಿ ನಡೆಸಿರುವುದು ಆಶ್ಚರ್ಯವೆನಿಸಿದೆ.

