ಕ್ರಿಶ್ಚಿಯನ್ ಧರ್ಮದಲ್ಲಿ ಗುಡ್ ಫ್ರೈಡೇ ಮತ್ತು ಈಸ್ಟರ್ ಭಾನುವಾರ ಅತ್ಯಂತ ಪವಿತ್ರ ದಿನಗಳಾಗಿ ಪರಿಗಣಿಸಲಾಗುತ್ತವೆ. ಈ ವರ್ಷ ಏಪ್ರಿಲ್ 3ರಂದು ಗುಡ್ ಫ್ರೈಡೇ ಆಚರಿಸಲ್ಪಟ್ಟಿದ್ದು, ಅದರ ಎರಡು ದಿನಗಳ ಬಳಿಕ ಏಪ್ರಿಲ್ 5ರಂದು ಈಸ್ಟರ್ ಭಾನುವಾರವನ್ನು ವಿಶ್ವದಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.
ಇಂದು ಪವಿತ್ರ ಶನಿವಾರ (ಹೋಲಿ ಸ್ಯಾಟರ್ಡೇ) ಆಗಿದ್ದು, ಇದು ಶೋಕ, ಮೌನ ಮತ್ತು ನಿರೀಕ್ಷೆಯ ದಿನವಾಗಿ ಪರಿಗಣಿಸಲಾಗುತ್ತದೆ. ಯೇಸುಕ್ರಿಸ್ತನ ಶಿಲುಬೆಗೆರಿಸಿದ ನಂತರದ ಈ ದಿನದಲ್ಲಿ ಭಕ್ತರು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಂಡು, ಪುನರುತ್ಥಾನದ ಸಂಭ್ರಮಕ್ಕೆ ಸಿದ್ಧರಾಗುತ್ತಾರೆ.
ಕ್ರಿಶ್ಚಿಯನ್ ನಂಬಿಕೆಯ ಪ್ರಕಾರ, ಗುಡ್ ಫ್ರೈಡೇ ದಿನ ಯೇಸುಕ್ರಿಸ್ತನನ್ನು ಶಿಲುಬೆಗೆರಿಸಲಾಯಿತು. ಆದರೆ, ಅವರು ಸಾವನ್ನು ಜಯಿಸಿ ಭಾನುವಾರದಂದು ಪುನರುತ್ಥಾನಗೊಂಡರು. ಈ ಮಹತ್ವದ ಘಟನೆಗೆ ಸ್ಮರಣಾರ್ಥವಾಗಿ ಈಸ್ಟರ್ ಭಾನುವಾರವನ್ನು ಆಚರಿಸಲಾಗುತ್ತದೆ. ಈ ದಿನವು ಮನುಕುಲಕ್ಕೆ ಭರವಸೆ, ಹೊಸ ಜೀವನ ಮತ್ತು ಕತ್ತಲೆಯ ನಂತರ ಬೆಳಕು ಬರುತ್ತದೆ ಎಂಬ ಸಂದೇಶವನ್ನು ಸಾರುತ್ತದೆ.
ಬೈಬಲ್ ಪ್ರಕಾರ, ಪುನರುತ್ಥಾನದ ನಂತರ ಯೇಸು ಸುಮಾರು 40 ದಿನಗಳ ಕಾಲ ಭೂಮಿಯ ಮೇಲೆ ಉಳಿದು, ಪ್ರೀತಿ, ಕ್ಷಮೆ ಮತ್ತು ಕರುಣೆಯ ಮೌಲ್ಯಗಳನ್ನು ತನ್ನ ಅನುಯಾಯಿಗಳಿಗೆ ಬೋಧಿಸಿದರು.
ಈಸ್ಟರ್ ಹಬ್ಬದ ದಿನಾಂಕವು ಪ್ರತಿವರ್ಷ ಬದಲಾಗುತ್ತಿದ್ದು, ಖಗೋಳಶಾಸ್ತ್ರದ ಲೆಕ್ಕಾಚಾರವನ್ನು ಆಧರಿಸಿದೆ. ಸಾಮಾನ್ಯವಾಗಿ ವಸಂತ ಸಮನಾದಿ (Spring Equinox) ನಂತರ ಬರುವ ಮೊದಲ ಹುಣ್ಣಿಮೆಯ ಬಳಿಕದ ಭಾನುವಾರವನ್ನು ಈಸ್ಟರ್ ಎಂದು ಆಚರಿಸಲಾಗುತ್ತದೆ.















