ದಾವಣಗೆರೆ: ಈ ಹಿಂದೆ ಸಮಾಜವನ್ನು ಒಡೆದು ಇಬ್ಬಾಗ ಮಾಡಲು ಹೋಗಿ ಕೈ ಸುಟ್ಟಿಕೊಂಡರು. ಇದೀಗ ಜಾತಿಗಣತಿ ಮೂಲಕ ಸಮಾಜವನ್ನು ಸಂಕುಚಿತ ಮಾಡಲು ಹೊರಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ, ಶ್ರೀ ಶೈಲ ಮಠದ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಿಡಿಕಾರಿದ್ದಾರೆ.
ಲಿಂಗಾಯತ ಅಧಿವೇಶನದಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಯಾವಾಗ ಅನ್ಯಾಯವಾಗುತ್ತದೋ, ಸಮಾಜಕ್ಕೆ ಯಾವಾಗ ಧಕ್ಕೆಯಾಗುತ್ತದೋ ಅಂದು ಸಮಾಜದ ಪರವಾಗಿ ನಿಂತಿರುವುದು ಲಿಂಗಾಯತ ಸಮುದಾಯ. ಕೆಲವರು ರಾಜಕೀಯ ವಿಚಾರಕ್ಕೆ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದರು. ಆಗ ಸಮಾಜದ ಪರವಾಗಿ ನಿಂತು, ಇಬ್ಬಾಗವಾಗದಂತೆ ತಡೆದವರು ಶಾಮನೂರು ಶಿವಶಂಕರಪ್ಪನವರು. ರಾಜಕೀಯ ಮುಖ್ಯವಲ್ಲ, ಸಮಾಜ ಮುಖ್ಯ ಎಂದು ನಿಂತರು. ಪದೇ ಪದೇ ಸಮಾಜದ ವಿಚಾರಕ್ಕೆ ಕೈ ಹಾಕಿದವರಿಗೆ ಎಚ್ಚರಿಕೆ ಕೊಡುತ್ತೇವೆ. ಹಿಂದೆ ಸಮಾಜ ಒಡೆಯಲು ಹೋಗಿ ಕೈ ಸುಟ್ಟಿಕೊಂಡರು.
ಈಗ ಮತ್ತದೆ ಕೆಲಸವನ್ನು ಮಾಡುವುದಕ್ಕೆ ಹೊರಟಿದ್ದಾರೆ. ಮತ್ತೆ ಕೈ ಸುಟ್ಟುಕೊಳ್ಳಬೇಕಾಗುತ್ತದೆ. ಹಿಂದೆ ಚೆನ್ನಪ್ಪರೆಡ್ಡಿ ಆಯೋಗ ಜಾತಿಗಣತಿ ವರದಿ ಮಾಡಿದಾಗ ಒಂದು ಕೋಟಿಗೂ ಅಧಿಕ ಇತ್ತು. ಈಗ ಮತ್ತೆ ಜಾತಿಗಣತಿ ಮಾಡಿದರೆ ವೀರಶೈವ ಎರಡು ಕೋಟಿಗೂ ಅಧಿಕವಾಗುತ್ತದೆ. ಲಿಂಗಾಯತ ಒಳಪಂಗಡಗಳೆಲ್ಲಾ ಒಂದಾಗಬೇಕು. ಮುಸ್ಲಿಂ ಸಮುದಾಯಕ್ಕೆ ಹೇಗೆ 786 ಕೋಡ್ ಇದೆಯೋ ಅದೇ ತರಹ ವೀರಶೈವ ಲಿಂಗಾಯತ ಧರ್ಮಕ್ಕೆ ಒಂದು ಕೋಡ್ ಹೇಳುತ್ತೇವೆ. 856 ವೀರಶೈವ ಲಿಂಗಾಯತ ಕೋಡ್ ಆಗಿ ಬಳಸಬೇಕು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.