ರಾಯಚೂರು: ಕಳೆದ ಕೆಲವು ದಿನಗಳ ಹಿಂದೆ ನಗರಸಭೆ ಸಪ್ಲೈ ಮಾಡಿದ್ದ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥರಾಗಿದ್ದರು. ವಾಂತಿ ಬೇಧಿಯಿಂದ ಆಸ್ಪತ್ರೆ ಸೇರಿದ್ದರು. ಈ ಪ್ರಕರಣ ಸಂಬಂಧ ದಿನೇ ದಿನೇ ಸಾವು ನೋವು ಹೆಚ್ಚಾಗುತ್ತಿದೆ. ಇಂದು ಅಬ್ದುಲ್ ಕರೀಂ ಎಂಬ ವ್ಯಕ್ತಿ ನಿಧನ ಹೊಂದಿದ್ದು, ಈ ಮೂಲಕ ನಾಲ್ಕನೆ ಸಾವು ಸಂಭವಿಸಿದೆ.
ಕಲುಷಿತ ನೀರು ಕುಡಿದಿದ್ದ ಪರಿಣಾಮ ಅಬ್ದುಲ್ ಗೆ ವಾಂತಿ ಬೇಧಿ ಸಮಸ್ಯೆ ಶುರುವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಎಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದರು ಅಬ್ದುಲ್. ಕಲುಷಿತ ನೀರಿನಿಂದಾಗಿ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಅರ್ಚನಾ ಮಾತನಾಡಿದ್ದು, ನೀರಿನ ಶುದ್ಧೀಕರಣ ಮತ್ತು ಸರಬರಾಜು ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಘಟನೆಯಲ್ಲಿ ಇನ್ಯಾರ ತಪ್ಪು ಇದೆ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಶುದ್ಧೀಕರಣ ಘಟಕದಲ್ಲಿ ಪ್ರಯೋಗಾಲಯ ಕೆಲಸ ಮಾಡುತ್ತಿಲ್ಲ. ಸಿಬ್ಬಂದಿಯೂ ಇಲ್ಲ. ನೀರು ಶುದ್ಧೀಕರಣಕ್ಕೆ ಬೇಕಾದ ರಾಸಾಯನಿಕ ಸಂಗ್ರಹಿಸಿಟ್ಟಿಲ್ಲ. ಘಟಕದ ಜೊತೆಗೆ ಪೈಪ್ ಲೈನ್ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.