ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಭರ್ಜರಿ ತಯಾರಿ ನಡೆದಿದೆ. ಇದರ ನಡುವೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಳವಾಗಲಿದೆ. ಈಗಾಗಲೇ ಹಲವರು ಕ್ಷೇತ್ರವನ್ನು ಲಾಕ್ ಮಾಡಿಕೊಂಡು ಟಿಕೆಟ್ ಗಾಗಿ ಕಾಯುತ್ತಿದ್ದಾರೆ. ಅಂದುಕೊಂಡಂತೆ ಎಲ್ಲರಿಗೂ ಟಿಕೆಟ್ ಸಿಗುವುದಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರು ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿತ್ತು. ಹೀಗಾಗಿಯೇ ಸದಾನಂದಗೌಡ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾಗುತ್ತಿದೆ.
ಈ ವಿಚಾರವಾಗಿ ಕಾಂಗ್ರೆಸ್ ವ್ಯಂಗ್ಯವಾಡಿದ್ದು, ಬಿಜೆಪಿ ಹೈಕಮಾಂಡ್ ನಾಯಕರು ಕರೆಸಿ ಅವಮಾನಿಸಿ ಕಳಿಸಿದ್ದರಿಂದ ನೊಂದ ಸದಾನಂದಗೌಡರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. “ಸಂತೋಷ ಕೂಟ”ದ ದಾಳಕ್ಕೆ ಮುಂದಿನ ಲೋಕಸಭೆಯ ಟಿಕೆಟ್ ಸಿಗದೆ ಮತ್ತೊಮ್ಮೆ ಅವಮಾನವಾಗುವ ಸುಳಿವನ್ನು ಅರಿತು ಈಗಲೇ ಗುಡ್ ಬೈ ಹೇಳಿದ್ದಾರೆ. ಎಲ್ಲಾ ತಲೆಗಳನ್ನೂ ಉರುಳಿಸಿ “ನಾಯಕತ್ವ ಮುಕ್ತ ಬಿಜೆಪಿ” ಮಾಡುವಲ್ಲಿ ಸಂತೋಷ ಕೂಟ ಯಶಸ್ವಿಯಾಗಿದೆ ಎಂದು ಟ್ವೀಟ್ ಮಾಡಿದೆ.
ಇತ್ತಿಚೆಗಷ್ಟೇ ಡಿವಿ ಸದಾನಂದಗೌಡ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಹಾಸನದ ಬರ ಅಧ್ಯನ ನಡೆಸಲು ಹೋದಾಗ, ಬರದ ಬಗ್ಗೆ ಮಾತನಾಡುತ್ತಾ, ಪಕ್ಷ ಇಷ್ಟು ವರ್ಷದಲ್ಲಿ ನನಗೆ ಎಲ್ಲವನ್ನು ಕೊಟ್ಟಿದೆ. ಯಡಿಯೂರಪ್ಪ ಆದಮೇಲೆ ನನಗೆ ಎಲ್ಲವನ್ನು ನೀಡಿರುವುದು ಎಂದು ಪಕ್ಷದ ಬಗ್ಗೆ ಮಾತನಾಡಿ, ನಿವೃತ್ತಿ ಘೋಷಣೆ ಮಾಡಿದ್ದರು.