ಸುದ್ದಿಒನ್, ಚಿತ್ರದುರ್ಗ, ಮಾರ್ಚ್, 28 : ಸಿಡಿಲಿಗು ಬೆಚ್ಚದ ಕಲ್ಲಿನ ಕೋಟೆ, ವೀರವನಿತೆ ಒನಕೆ ಓಬವ್ವ, ಪಾಳೇಗಾರರ ಇತಿಹಾಸದ ಬೀಡು, ಏಳುಸುತ್ತಿನ ಕೋಟೆ ವೀಕ್ಷಿಸಲು ಬೇಕು ಏಳು ದಿನ, ಹೀಗೆ ಅನೇಕ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರದುರ್ಗದ ಐತಿಹಾಸಿಕ ಕೋಟೆ ಅನೇಕರ ಆಳ್ವಿಕೆಗೆ ಸಾಕ್ಷಿಯಾಗಿದೆ..!

ಇಂತಹ ಐತಿಹಾಸಿಕ ಚಿತ್ರದುರ್ಗ ಜಿಲ್ಲೆಯ ಇತಿಹಾಸ ಹೊರಜಗತ್ತಿಗೆ ತೆರೆದುಕೊಳ್ಳಬೇಕಾಗಿದೆ. ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳು, ಯೋಜನೆಗಳು ರೂಪುಗೊಳ್ಳಬೇಕಾಗಿದೆ. ಅದರ ಮೊದಲ ಹೆಜ್ಜೆಯಾಗಿ ದುರ್ಗೋತ್ಸವ ಆಚರಣೆಗೆ ಜಿಲ್ಲೆಯ ಸಚಿವರು, ಶಾಸಕರು, ಎಂಎಲ್ಸಿಗಳು ಮುಂದಾಗಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜಿಲ್ಲಾ ಸಚಿವ ಡಿ.ಸುಧಾಕರ್ ನೇತೃತ್ವದ ನಿಯೋಗ, ಹಕ್ಕೊತ್ತಾಯ ಮಂಡಿಸಿದೆ.
ಜಿಲ್ಲೆಯಲ್ಲಿ ಅಶೋಕನ ಶಿಲಾಶಾಸನ, ಚಂದ್ರಗುಪ್ಪ ಮೌರ್ಯ ಕಾಲದ ಚಂದ್ರವಳ್ಳಿ ಕೆರೆ, ಗುಹೆ, ಏಷ್ಯಾ ಖಂಡದಲ್ಲಿಯೇ ಹೆಚ್ಚು ಗಾಳಿ ಬೀಸುವ ಜೋಗಿಮಟ್ಟಿ ಅರಣ್ಯ ಪ್ರದೇಶ, ಗುರುಗಳ ಸೇವಾರ್ಥ ಪಾಳೇಗಾರರು ನಿರ್ಮಿಸಿಕೊಟ್ಟ ಮುರುಘಾಮಠ, ನಾಲ್ವಡಿ ಕೃಷ್ಣರಾಜ ರಾಜೇಂದ್ರ ಒಡೆಯರ್ ಅವರು ಬಯಲುಸೀಮೆ ಕೃಷಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ವಾಣಿ ವಿಲಾಸ ಸಾಗರ ಸೇರಿ ಅನೇಕ ವೀಕ್ಷಣೀಯ ಸ್ಥಳಗಳು ಇವೆ…!
ಆದರೆ, ಇವುಗಳ ಮಹತ್ವ ಕುರಿತು ಹೆಚ್ಚು ಪ್ರಚಾರ, ಮಾಹಿತಿ ಕೊರತೆ ಕಾರಣಕ್ಕೆ ಹಂಪಿ ಸೇರಿದಂತೆ ಜಿಲ್ಲೆಯಲ್ಲಿ ಹಾದು ಹೋಗಿರುವ ಹೆದ್ದಾರಿಗಳಲ್ಲಿಯೇ ಹಾದುಹಾಗುವ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡುವ ಮನಸ್ಸು ಮಾಡುತ್ತಿಲ್ಲ. ಇದಕ್ಕೆ ಪರಿಹಾರವೇ ದುಗೋತ್ಸವ ಎಂದು ನಿಯೋಗ ಸಿಎಂ ಗಮನಕ್ಕೆ ತಂದಿದೆ.
ದುಗೋತ್ಸವ ಆಚರಣೆಗಾಗಿ 10 ಕೋಟಿ ರೂಪಾಯಿ ಅನುದಾನ ನೀಡಬೇಕು. ಜೊತೆಗೆ ಐತಿಹಾಸಿಕ ಕೋಟೆಯತ್ತ ಪ್ರವಾಸಿಗರನ್ನು ಆಕರ್ಷಿಸಲು, ದುರ್ಗದ ಇತಿಹಾಸ ಜಗತ್ತಿಗೆ ಪರಿಚಯಿಸಲು ಹೆಚ್ಚು ಸಹಕಾರ ನೀಡಬೇಕು. ಈ ಕಾರಣಕ್ಕೆ ದುಗೋತ್ಸವ ಆಚರಣೆ ಅಗತ್ಯ ಎಂಬ ಅಭಿಪ್ರಾಯವನ್ನು ನಿಯೋಗ ವ್ಯಕ್ತಪಡಿಸಿದೆ.
ಒನಕೆ ಓಬವ್ವ, ಮದಕರಿನಾಯಕ ಶೂರತ್ವದ ಜೊತೆಗೆ ಕೋಟೆನಾಡು ಇತಿಹಾಸ ರಾಜ್ಯಾದ್ಯಂತ ಪಸರಿಸಲು ದುರ್ಗೋತ್ಸವ ಸಹಕಾರಿ ಆಗಲಿದೆ. ಆದ್ದರಿಂದ ಕಿತ್ತೂರು, ಹಂಪಿ ಉತ್ಸವ ರೀತಿ ದುರ್ಗೋತ್ಸವ ಆಚರಣೆಗೆ ಕ್ರಮಕೈಗೊಳ್ಳಬೆಕು. ಈ ಮೂಲಕ ಸಾಹಿತ್ಯ, ಜನಪದ ಸಂಸ್ಕೃತಿಯಲ್ಲಿ ಶ್ರೀಮಂತಿಕೆ ಹೊಂದಿರುವ ಚಿತ್ರದುರ್ಗದ ಖ್ಯಾತಿ ನಾಡಿನಾದ್ಯಂತ ಪರಿಚಯಿಸುವ ಕೆಲಸ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.
ಮುಖ್ಯವಾಗಿ ಕೋಟೆಗೆ ಲೇಸರ್ ಶೋ, ವಿದ್ಯುತ್, ಶೌಚಗೃಹ ಸೇರಿ ಅನೇಕ ಮೂಲ ಸೌಲಭ್ಯ ಕಲ್ಪಿಸಲು ದುರ್ಗೋತ್ಸವ ಬುನಾದಿ ಆಗಲಿದೆ. ಜೊತೆಗೆ ಅನೇಕ ಕಲಾವಿದರನ್ನು ಕರೆಯಿಸಿ ಜನರಿಗೆ ಮನರಂಜನೆ ರಸದೌತಣ ಉಣಬಡಿಸುವ ಕೆಲಸ ಮಾಡಲಾಗುವುದು. ದುರ್ಗೋತ್ಸವಕ್ಕೆ ಹಿರಿಯ ಕಲಾವಿದರನ್ನು ಆಹ್ವಾನಿಸಲು ನಿರ್ಣಯಿಸಿದ್ದು, ಆಚರಣೆಗೆ ಆಡಳಿತಾತ್ಮಕ ಒಪ್ಪಿಗೆ ಜೊತೆಗೆ ಪ್ರಸ್ತುತ ವರ್ಷದಲ್ಲಿ ಆಚರಣೆಗೆ ಅಗತ್ಯ ಅನುದಾನ ಒದಗಿಸಬೇಕು. ಮುಖ್ಯವಾಗಿ ತಾವು ಆಗಮಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಯೋಗ ಕೋರಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ ಇತರರಿದ್ದರು.

