ತುಮಕೂರು: ದುನಿಯಾ ವಿಜಯ್ ಅಭಿನಯದ ಭೀಮಾ ಸಿನಿಮಾ ತೆರೆಗೆ ಬಂದಿದೆ. ರಾಜ್ಯದಲ್ಲೂ ಡ್ರಗ್ಸ್ ಜಾಲ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಸಿನಿಮಾದಲ್ಲಿ ಮನಮುಟ್ಟುವಂತೆ ಹೇಳಿರುವುದಲ್ಲದೆ ರಿಯಲ್ ಆಗಿಯೂ ಆಖಾಡಕ್ಕೆ ಇಳಿದಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡುವ ಮೂಲಕ ಮಾದಕ ದ್ರವ್ಯದ ಜಾಲವನ್ನು ಎಳೆ ಎಳೆಯಾಗಿ ದುನಿಯಾ ಬಿಚ್ಚಿಡುತ್ತಿದ್ದಾರೆ.
ದುನಿಯಾ ವಿಜಯ್ ಅವರ ಈ ಕಾರ್ಯಕ್ಕೆ ಒಂದು ಕಡೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಮತ್ತೊಂದು ಕಡೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಮೆಡಿಕಲ್ ಸ್ಟೋರ್ ಗಳ ಮೇಲೆ ದಾಳಿ ನಡೆಸಿದ್ದು, ಅಧಿಕಾರಿಗಳೇ ಶಾಕ್ ಆಗಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿರುವ ಮೆಡಿಕಲ್ ಸ್ಟೋರ್ ಗಳ ಮೇಲೆ ಡ್ರಗ್ಸ್ ಕಂಟ್ರೋಲ್ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಡ್ರಗ್ಸ್ ಗೆ ಸಂಬಂಧಿಸಿದಂತ ಮಾತ್ರೆಗಳು ಪತ್ತೆಯಾಗಿರುವುದು ಕಂಡು ಬಂದಿದೆ.
ಮೆಡಿಕಲ್ ಗಳಲ್ಲಿ ಯಾವಾಗ ಡ್ರಗ್ಸ್ ಗಳು ಪತ್ತೆಯಾದವೋ ಪೊಲೀಸರು ತೀವ್ರ ತನಿಖೆಯನ್ನು ಶುರು ಮಾಡಿದ್ದಾರೆ. ವೈದ್ಯರ ಚೀಟಿಯಿಲ್ಲದೆ, ಮತ್ತು ಬರಿಸುವ ಮಾತ್ರೆಗಳ ಮಾರಾಟದ ಬಗ್ಗೆ ಅಧಿಕಾರಿಗಳು ಎಚ್ಚೆತ್ತು, ತನಿಖೆ ಶುರು ಮಾಡಿದ್ದಾರೆ. ಕುಣಿಗಲ್ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಇರುವ ಲಕ್ಷ್ಮೀ ವೆಂಕಟೇಶ್ವರ ಮೆಡಿಕಲ್ ಸ್ಟೋರ್ ಹಾಗೂ ಸಂತೆ ಮಾವತ್ತೂರಿನ ತಿರುಮಲ ಮೆಡಿಕಲ್ ಸ್ಟೋರ್ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿ ವೇಳೆ ಮೆಡಿಕಲ್ ಸ್ಟೋರ್ ಗಳಲ್ಲಿ ಡ್ರಗ್ಸ್ ಮಾತ್ರೆಗಳು ಪತ್ತೆಯಾಗಿದ್ದು, ಡ್ರಗ್ಸ್ ಕಂಟ್ರೋಲ್ ಅಧಿಕಾರಿಗಳು ಹಾಗೂ ಕುಣಿಗಲ್ ತಾಲೂಕು ವೈದ್ಯಾಧಿಕಾರಿ ಡಾ.ಮರಿಯಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ.