ದಾವಣಗೆರೆ: ಮಾರುಕಟ್ಟೆಯಲ್ಲಿ ಶೇಂಗಾಗೆ ಉತ್ತಮ ಬೆಲೆ ಇದೆ. ಇದು ಶೇಂಗಾ ಬೆಳೆಗಾರರಿಗೆ ಸಕಾರವಾಗಿತ್ತು. ಆದರೆ ಹವಮಾನ ವೈಪರೀತ್ಯವೂ ರೈತರಿಗೆ ಸಹಕಾರ ಕೊಡಬೇಕಲ್ಲ..? ಬೆಲೆ ಇದ್ದರು ಬೆಳೆ ಚೆನ್ನಾಗಿ ಬಂದಿಲ್ಲದೆ ಇರುವುದೇ ರೈತರಿಗೆ ಬೇಸರ ಉಂಟು ಮಾಡಿದೆ. ರಾಜ್ಯ ಸರ್ಕಾರ ಕೂಡ ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡಲು ಖರೀದಿ ಕೇಂದ್ರ ಆರಂಭಿಸಿತ್ತು. ಆದರೆ ಮಾರುಕಟ್ಟೆಗೆ ಗುಣಮಟ್ಟದ ಶೇಂಗಾವೇ ಬರುತ್ತಿಲ್ಲ ಎಂಬುದೇ ಬೇಸರವಾಗಿದೆ.
ದಾವಣಗೆರೆಯ ಜಗಳೂರು, ನ್ಯಾಮತಿ ತಾಲೂಕುಗಳಲ್ಲಿ ಸೂರ್ಯಕಾಂತಿ ಬೆಳೆಯನ್ನು ಬೆಳೆಯಲಾಗಿದೆ. ಉಳಿದಂತೆ ಹಲವು ಭಾಗಗಳಲ್ಲಿ ಶೇಂಗಾ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಜಿಲ್ಲೆಯಲ್ಲಿ ಆರಂಭವಾದ ಅನಾವೃಷ್ಠಿ, ನಂತರ ಮಳೆ ಅತಿವೃಷ್ಠಿಯಿಂದಾಗಿ ಶೇಂಗಾ ಬೆಳೆ ಮೇಲೆ ಪರಿಣಾಮ ಬೀರಿದೆ. ಹೂವಾಗಿ, ಕಾಳು ದಪ್ಪವಾಗಬೇಕು ಎನ್ನುವಾಗಲೇ ನಿರಂತರ ಮಳೆ ಸುರಿದು ಶೇಂಗಾ ಬೀಜದ ಗಾತ್ರ ದಪ್ಪವೇ ಆಗಿಲ್ಲ. ಒಂದಷ್ಟು ಟೊಳ್ಳು ಬೀಜಗಳೇ ಬಂದಿವೆ. ಜೊತೆಗೆ ಬಣ್ಣವೂ ಸರಿಯಾಗಿ ಬಂದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಶೇಂಗಾವನ್ನು ತೆಗೆದುಕೊಳ್ಳುವುದೇ ಕಷ್ಟವಾಗಿದೆ. ತೆಗೆದುಕೊಂಡರು ಬೆಂಬಲ ಬೆಲೆ ನೀಡುವುದು ಕಷ್ಟವಾಗಿದೆ.
ಜಿಲ್ಲೆಯಲ್ಲಿ ಸುಮಾರು 13,770 ಹೆಕ್ಟೇರ್ ನಷ್ಟು ಶೇಂಗಾ ಬೆಳೆ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಮಳೆ ಕೊರತೆಯಾಗಿತ್ತು. ಆದರೆ ಆಮೇಲೆ ವರುಣರಾಯ ಕೃಪೆ ತೋರಿದ್ದ. ಆಮೇಲೆ ಅತಿಯಾದ ಮಳೆಯೆ ಬೆಳೆಗೆ ಹಾನಿ ಮಾಡಿದೆ. ಸುಗ್ಗಿಗೂ ಮುನ್ನ ಶೇಂಗಾ ಬೆಳೆ ಕ್ವಿಂಟಾಲ್ ಗೆ 7 ಸಾವಿರ ದಾಟಿತ್ತು. ಕೇಂದ್ರ ಸರ್ಕಾರ 6,783 ರೂಪಾಯಿ ಬೆಂಬಲ ಬೆಲೆಯನ್ನು ನೀಡಿತ್ತು. ಆದರೆ ಈಗ ಸುಗ್ಗಿ ಶುರುವಾಗಿದೆ. ಆದರೆ 2,500 ರಿಂದ ಗರಿಷ್ಠ 4,500 ರೂಪಾಯಿ ಸಿಗ್ತಾ ಇದೆ.