ನವದೆಹಲಿ: ರಾಜ್ಯದಲ್ಲಿ ಮಳೆ ಇಲ್ಲದೆ ಬೆಳೆಯೂ ಕೈಗೆ ಸಿಗದೆ ರೈತ ಕಂಗಲಾಗಿ ಕುಳಿತಿದ್ದಾನೆ. ಈ ವರ್ಷದ ಕೃಷಿಯ ಕನಸು ಅಷ್ಟೇ ಎಂಬ ಚಿಂತೆಯಲ್ಲಿ ರೈತನಿದ್ದಾನೆ. ರಾಜ್ಯದಲ್ಲಿ ಬರದ ಸ್ಥಿತಿ ಉಂಟಾಗಿದ್ದು, ಈಗಾಗಲೇ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಇದೀಗ ಬರ ಸಮೀಕ್ಷೆ ನಡೆಸಲು ಕೇಂದ್ರದಿಂದಾನೇ ನಾಳೆ ತಂಡವೊಂದು ರಾಜ್ಯಕ್ಕೆ ಆಗಮಿಸಲಿದೆ.
ಕೇಂದ್ರ ಸರ್ಕಾರದ ಮೂರು ತಂಡ ನಾಳೆ ರಾಜ್ಯಕ್ಕೆ ಭೇಟಿ ನೀಡಲಿದೆ. ನಾಳೆಯಿಂದ ಅಕ್ಟೋಬರ್ 9ರವರೆಗೂ ಒಟ್ಟು ಹನ್ನೆರಡು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಿದೆ. ಬರದ ಸಮೀಕ್ಷೆಯ ಪ್ರವಾಸಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ಕೂಡ ನಡೆಯಲಿದೆ.
ಚಿತ್ರದುರ್ಗ, ದಾವಣಗೆರೆ, ಧಾರವಾಡ, ತುಮಕೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಕೊಪ್ಪಳ, ವಿಜಯನಗರ, ಚಿಕ್ಕಬಳ್ಳಾಪುರ ಸೇರಿದಂತೆ 12 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಿದೆ. ಕೇಂದ್ರದ ಬಳಿ ಬರ ಪೀಡಿತ ಪ್ರದೇಶಗಳಿಗೆ 6 ಸಾವಿರ ಕೋಟಿ ಪರುಹಾರವನ್ನು ಕೇಳಿದೆ. ಈಗ ಕೇಂದ್ರದ ತಂಡ ಪರಿಶೀಲನೆ ನಡೆಸಿ, ಯಾವ ರೀತಿಯ ವರದಿ ನೀಡಲಿದೆ ಅದರ ಮೇಲೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ.
ಮುಂಗಾರು ಮಳೆ ಕೈಕೊಟ್ಟಿದ್ದೇ ರೈತರಿಗೆ ದೊಡ್ಡ ನಷ್ಟ ಉಂಟಾಗಿರುವುದು. ಮುಂಗಾರು ಮಳೆಯಲ್ಲಿ ಮಳೆ ಬೆಳೆಯ ಬಿತ್ತನೆ ಮಾಡಲಾಗುತ್ತದೆ. ಆದರೆ ಈ ಬಾರಿಯ ಬಿತ್ತನೆಗೆ ಮಳೆಯ ಹನಿಯೇ ಬೀಳದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ ರಾಜ್ಯ ಸರ್ಕಾರ ರಾಜ್ಯದ ರೈತರ ಪರಿಸ್ಥಿತಿ ಕಂಡು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿತ್ತು.