ಮಳೆಯಿಲ್ಲದೆ ಬೆಳೆ ನೆಲ ಕಚ್ಚಿದೆ. ರಾಜ್ಯಾದ್ಯಂತ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆದರೆ ಕೇಂದ್ರದಿಂದ ಕೂಡ ಇನ್ನು ಬರ ಪರಿಹಾರ ಸಿಕ್ಕಿಲ್ಲ. ಇದರ ಜೊತೆಗೆ ಬರ ಪರಿಹಾರ ಪಡೆಯಬೇಕು ಅಂದ್ರೆ ರೈತರ ಬಳಿ ಎಫ್ಐಡಿ ಇರಲೇಬೇಕಾಗುತ್ತದೆ. ಏನಿದು ಎಫ್ಐಡಿ, ಪಡೆಯುವುದು ಹೇಗೆ ಎಂಬ ವಿವರ ಇಲ್ಲಿದೆ.
ಭೂಮಿ ವಿವರ ಇರುವಂತ ಎಫ್ಐಡಿಯನ್ನು ರೈತರು ಪಡೆಯಬೇಕು. ಇದರಲ್ಲಿ ತಮ್ಮ ಹಕ್ಕಿನಲ್ಲಿರುವ ಎಲ್ಲಾ ಭೂಮಿಯನ್ನು ಸೇರಿಸಬೇಕು. ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಮತ್ತು ಕೃಷಿಗೆ ಪೂರಕವಾದ ಇಲಾಖೆಗಳ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಅಧೀನ ಕಚೇರಿಗಳಲ್ಲಿ ರೈತರ ಫ್ರೂಟ್ಸ್ ಐಡಿ ಸೃಷ್ಟಿಸಲು ಕ್ರಮವನ್ನು ಕೈಗೊಳ್ಳಲಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕೆಂದು ಕರೆ ನೀಡಲಾಗಿದೆ.
ಎಫ್‍ಐಡಿಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೇ ನಂಬರ್ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಇರುವ ರೈತರ ಫ್ರೂಟ್ಸ್ ಐಡಿಯಲ್ಲಿ ರೈತರ ಜಮೀನು, ಆಧಾರ ನಂಬರ್, ಬ್ಯಾಂಕ್ ಅಕೌಂಟ್ ಸೇರಿದಂತೆ ಎಲ್ಲಾ ವಿವರ ಇರುತ್ತದೆ. ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೆ ಡಿಬಿಟಿ ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ರೈತರು ಎಫ್‍ಐಡಿ ಮಾಡಿಸಿಕೊಳ್ಳಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ತಮ್ಮ ಹೆಸರಿನಲ್ಲಿರುವ ಎಲ್ಲ ಜಮೀನುಗಳ ಪಹಣಿ, ತಮ್ಮ ಮೊಬೈಲ್ ಸಂಖ್ಯೆ ಹಾಗೂ ಅಗತ್ಯವಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.